ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ತೀವ್ರ ಕಸರತ್ತು ನಡೆಸುತ್ತಿದ್ದು, ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಆದರೆ ನೂತನ ಸತಿವರ ಪ್ರಮಾಣವಚನ ಸಮಾರಂಭಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದೆ.
ಮೇ 27ರಂದು ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪದಗ್ರಹಣ ನಡೆಯಲಿದೆ. ಒಟ್ಟು 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸರ್ಕಾರದ ಮನವಿ ಮೇರೆಗೆ ಶನಿವಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ದೆಹಲಿಯ ಜಿಆರ್ಜಿ ರಸ್ತೆಯಲ್ಲಿರುವ ಕಾಂಗ್ರೆಸ್ ವಾರ್ ರೂಮ್ನಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಇಂದು ಬೆಳಗ್ಗೆ 11.30ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆ ಸಭೆ ನಡೆಸಿದ್ದರೂ ಪಟ್ಟಿ ಅಂತಿಮವಾಗಿಲ್ಲ.
ಹಿರಿಯರ ಶಾಸಕರ ಸಂಪುಟ ಸೇರ್ಪಡೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಒಮ್ಮತ ಮೂಡಿಲ್ಲ. ಸಂಪುಟಕ್ಕೆ ಆರ್.ವಿ.ದೇಶಪಾಂಡೆ ಸೇರಿ ಹಲವು ಹಿರಿಯರ ಸೇರ್ಪಡೆಗೆ ಡಿಕೆ ಶಿವಕುಮಾರ್ ಅವರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಅವರು ಮಧು ಬಂಗಾರಪ್ಪ, ಬಿ.ಕೆ.ಹರಿಪ್ರಸಾದ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಒಂದೇ ಸಮುದಾಯದ ಮಧು, ಹರಿಪ್ರಸಾದ್ ಸೇರ್ಪಡೆಗೆ ಸಿದ್ದರಾಮಯ್ಯ ಅವರು ಅಸಮ್ಮತಿ ಸೂಚಿಸಿದ್ದಾರೆ. ಇದೇ ರೀತಿ 4-5 ಸಚಿವ ಆಕಾಂಕ್ಷಿಗಳ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ. ಇಂದು ತಡರಾತ್ರಿಯೂ ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement