ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಕೈ ಮೇಲು: ಲಿಂಗಾಯತ- ದಲಿತರಿಗೆ ಸಿಂಹಪಾಲು!

ರಾಜ್ಯದ ಗಮನ ಸೆಳೆದಿದ್ದ ಸಚಿವ ಸಂಪುಟ ವಿಸ್ತರಣೆ ಮುಗಿದಿದೆ, ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ 24 ಸಚಿವರ ಸೇರ್ಪಡೆಯಾಗಿದೆ. ಹಲವು ಸರಣೆ ಸಭೆಗಳ ಬಳಿಕ ಕಾಂಗ್ರೆಸ್ ಸರಕಾರದ ನೂತನ ಸಚಿವರ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ.
ಚಲುವರಾಯಸ್ವಾಮಿ ಮತ್ತು ಬೈರತಿ ಸುರೇಶ್ , ಮಧು ಬಂಗಾರಪ್ಪ
ಚಲುವರಾಯಸ್ವಾಮಿ ಮತ್ತು ಬೈರತಿ ಸುರೇಶ್ , ಮಧು ಬಂಗಾರಪ್ಪ
Updated on

ಬೆಂಗಳೂರು: ರಾಜ್ಯದ ಗಮನ ಸೆಳೆದಿದ್ದ ಸಚಿವ ಸಂಪುಟ ವಿಸ್ತರಣೆ ಮುಗಿದಿದೆ, ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ 24 ಸಚಿವರ ಸೇರ್ಪಡೆಯಾಗಿದೆ. ಹಲವು ಸರಣೆ ಸಭೆಗಳ ಬಳಿಕ ಕಾಂಗ್ರೆಸ್ ಸರಕಾರದ ನೂತನ ಸಚಿವರ ಪಟ್ಟಿ ಶುಕ್ರವಾರ ಬಿಡುಗಡೆಯಾಗಿದೆ. ಶನಿವಾರ ಬೆಳಗ್ಗೆ 11.45 ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದು, 24 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರುಗಳನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮತೋಲನ ಮೆರೆದಿದ್ದಾರೆ.

ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ ಲಭಿಸಿದ್ದು ಮುನಿಯಪ್ಪ, ಜಿ.ಪರಮೇಶ್ವರ್, ಹೆಸ್.ಸಿ.ಮಹದೇವಪ್ಪ, ಆರ್.ಬಿ. ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ.

ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ. ಹಿಂದುಳಿದ ಜಾತಿಗಳಲ್ಲಿ ಅತ್ಯಂತ ಸಣ್ಣ ಸಮುದಾಯ ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ.

ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ (ಈಡಿಗ) ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ.

ಲಿಂಗಾಯತ ಸಮುದಾಯಕ್ಕೆ ಒಟ್ಟು ಎಂಟು ಸಚಿವ ಸ್ಥಾನ ನೀಡಲಾಗಿದ್ದು, ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್‌ಕರ್ ಮತ್ತು ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಶರಣ ಪ್ರಕಾಶ ಪಾಟೀಲ್, ದರ್ಶನಾಪುರ, ಹೆಚ್.ಕೆ.ಪಾಟೀಲ್ ಅವರು ಲಿಂಗಾಯತರ ಖೋಟಾದಲ್ಲಿ ಸಚಿವರಾಗಿದ್ದಾರೆ.

ಒಕ್ಕಲಿಗರಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ, ಪಿರಿಯಾಪಟ್ಟಣ ವೆಂಕಟೇಶ್, ಎಂ.ಸಿ.ಸುಧಾಕರ್, ಕೃಷ್ಣಬೈರೇಗೌಡ ಸೇರಿ ಐದು ಮಂದಿಗೆ ಪ್ರಾತಿನಿಧ್ಯ ದೊರೆತಿದೆ.

ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ. ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ.

ಸಚಿವರ ಆಯ್ಕೆಯಲ್ಲಿ ಸಾಮಾಜಿಕ ನ್ಯಾಯವನ್ನು ಪಾಲಿಸುವಾಗ ಪ್ರಾದೇಶಿಕ ನ್ಯಾಯ ಸಮತೋಲನ ತಪ್ಪದಂತೆಯೂ ಎಚ್ಚರ ವಹಿಸಿರುವುದು ಸಿದ್ದರಾಮಯ್ಯ ಅವರ ಆಯ್ಕೆ ಸಮತೂಕದಲ್ಲಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿದೆ. ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com