ಸಿಎಂ ಆಗುವ ಆತುರ ನನಗಿಲ್ಲ; ಕುಮಾರಸ್ವಾಮಿ ಮೊದಲು ಎನ್ ಡಿಎ ಮೈತ್ರಿಯಿಂದ ಆಚೆ ಬಂದು ಮಾತಾಡಲಿ: ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್ ಅವರು ನಾಳೆಯೇ ಸಿಎಂ ಆಗುವುದಾದರೆ ತಮ್ಮ ಪಕ್ಷದ 19 ಶಾಸಕರು ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಹುಬ್ಬಳ್ಳಿ: ಡಿ ಕೆ ಶಿವಕುಮಾರ್ ಅವರು ನಾಳೆಯೇ ಸಿಎಂ ಆಗುವುದಾದರೆ ತಮ್ಮ ಪಕ್ಷದ 19 ಶಾಸಕರು ಬೆಂಬಲ ನೀಡಲು ಸಿದ್ಧರಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ನಿನ್ನೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್ ಸಿಎಂ ಹುದ್ದೆ ವಹಿಸಿಕೊಳ್ಳುವ ಆತುರ, ತರಾತುರಿ ತಮಗಿಲ್ಲ. ನಾವು ಈ ಬಾರಿ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಡಿ ಎದುರಿಸಿದೆ ಗೆದ್ದು ಅಧಿಕಾರಕ್ಕೆ ಬಂದೆವು. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಬೇಕು. ಸಿಎಂ ಆಗುವ ಆತುರ ನನಗಿಲ್ಲ. ಸಿಎಂ ಹುದ್ದೆ ನನಗೆ ಕೊಡಿ ಎಂದು ನಾನು ಪಕ್ಷದ ಹೈಕಮಾಂಡ್ ಸೇರಿದಂತೆ ಯಾರ ಬಳಿಯೂ ಬೇಡಿಕೆ ಇಟ್ಟಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯನವರ ಜೊತೆಗೆ ಇರುವ ಬಾಂಧವ್ಯದ ಕುರಿತು ಸಹ ಇದೇ ಸಂದರ್ಭದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್,  ಪಕ್ಷದ ಹೈಕಮಾಂಡ್ ನೀಡುವ ಆದೇಶವನ್ನು ಪಾಲಿಸುತ್ತೇನೆ, ಮೊದಲಿನಿಂದಲೂ ನಾವು ಹೈಕಮಾಂಡ್ ಹೇಳಿದಂತೆ ಕೇಳಿಕೊಂಡು ಬಂದಿದ್ದೇವೆ. ಸಿದ್ದರಾಮಯ್ಯ ಅವರು ನಮ್ಮ ನಾಯಕರು, ಸಿದ್ದರಾಮಯ್ಯನವರು ಕೂಡ ಅದನ್ನೇ ಹೇಳಿದ್ದಾರೆ ಅದು ನಮ್ಮ ಬದ್ಧತೆ ಎಂದರು. 

ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಜೋರಾಗಿದೆ, ಸಿಎಂ ಹುದ್ದೆಗೆ ಎರಡೂ ಬಣಗಳ ನಡುವೆ ಕಿತ್ತಾಟ ನಡೆಯುತ್ತಿದೆ ಎಂಬ ಮಾತುಗಳು ರಾಜ್ಯ ರಾಜಕೀಯದಲ್ಲಿ ಜೋರಾಗಿದ್ದು ಈ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್​ ನಾಳೆಯೇ ಸಿಎಂ ಆಗುವುದಾದರೆ ಜೆಡಿಎಸ್​ ಬೆಂಬಲ ನೀಡುತ್ತದೆ ಎಂದಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ದಯವಿಟ್ಟು ನಾನು ಕುಮಾರಸ್ವಾಮಿ ಅವರಿಗೆ ಮನವಿ ಮಾಡುತ್ತೇನೆ. ನಾವು 136 ಜನ ಇದ್ದೀವಿ, ಸಾಕಷ್ಟು ಬೆಂಬಲ ಇದೆ, ನಿಮ್ಮ ಪಕ್ಷ ಎನ್ ಡಿಎಯಲ್ಲಿ ಇದೆ. ಅಲ್ಲಿ ಇದ್ದುಕೊಂಡು ಕಾಂಗ್ರೆಸ್ ಪಾರ್ಟಿ ಬಗ್ಗೆ ಯಾಕೆ ಮಾತನಾಡುತ್ತೀರಾ? ಕುಮಾರಸ್ವಾಮಿ ಅವರ ಪ್ರೀತಿ ಏನಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ.

ದೆಹಲಿಯಲ್ಲಿ ಏನು ನಡೆಯಿತು? ಯಾರನ್ನು ಭೇಟಿ ಮಾಡಿದ್ದರು? ಏನು ಮಾತುಕತೆ ಆಗಿದೆ? ಏನೆಲ್ಲಾ ದೊಡ್ಡ ಪ್ಲಾನ್ ಗಳಾಗಿವೆ ಅನ್ನೋದನ್ನು ಅವರ ಜೊತೆಯಲ್ಲಿ ಇದ್ದವರೆ ಎಲ್ಲವನ್ನು ಬಯಲು ಮಾಡಿದ್ದಾರೆ. ಅದರ ಬಗ್ಗೆ ಎಲ್ಲಾ ಬಿಚ್ಚಿ ಈಗ ಚರ್ಚೆ ಮಾಡೋದು ಬೇಡಾ, ಅವರಿಗೆ ಅಷ್ಟು ಪ್ರೀತಿ ಕರುಣೆ ಇದ್ದರೆ ಅವರು ಏನೇನು ಮಾತನಾಡಿದ್ದಾರೆ ಅದನ್ನು ರಿಕಾಲ್ ಮಾಡಿಕೊಂಡು ಮಾತನಾಡಲಿ ಎಂದು ಹೇಳಿದರು.

ಅಲ್ಲದೇ, ಮೈತ್ರಿ ಸರ್ಕಾರ ಹೋದ ಮೇಲೆ ಏನೆಲ್ಲಾ ಘಟನೆಗಳು ಆದವು, ಏನೆಲ್ಲಾ ಚರ್ಚೆ ಆಗಿದೆ ಅನ್ನೋ ಬಗ್ಗೆ ಅವರ ಆತ್ಮಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಲಿ. ಆ ಬಳಿಕ ಪಬ್ಲಿಕ್ ನಲ್ಲಿ ಮಾತನಾಡಲಿ. ಅವರು ಬೆಂಬಲ ನೀಡ್ತೀನಿ ಅಂದಿರೋದು ಬಹಳ ಸಂತೋಷ, ಅವರ ಪ್ರೀತಿ ವಿಶ್ವಾಸಕ್ಕೆ ನಮಸ್ಕಾರ. ಆದರೆ ಮಾಡುವ ಕಾಲದಲ್ಲೇ ಅವರಿಗೆ ಮಾಡೋಕೆ ಆಗಲಿಲ್ಲ, ಈಗ ಏನು ಮಾಡ್ತಾರೆ. ಸದ್ಯ ಅವರು ಎನ್​​ಡಿಎ ಪಾರ್ಟಿನಲ್ಲಿದ್ದಾರೆ ಈವಾಗ ಏನು ಬೇಡ, ಜನ ಆಶೀರ್ವಾದ ಕೊಟ್ಟಿದ್ದಾರೆ ಸಾಕು ಎಂದರು.

ಟೀಕೆ ಮಾಡೋದಲ್ಲ, ತಿದ್ದುವಂತಹ ಕೆಲಸ ಮಾಡಬೇಕು: ಅವರು ಈಗ ಎನ್​ಡಿಎ ಪಾರ್ಟಿ, ನಮಗೂ ಎನ್​​ಡಿಎಗೂ ಏನು ಸಂಬಂಧ. ಮೊದಲು ಅವರು ಎನ್​​ಡಿಎಯಿಂದ ಆಚೆ ಬಂದು ಯಾರಾದರೂ ಮಾತನಾಡಲಿ. ನಮ್ಮದು 136 ಸೀಟ್ ಇದೆ. ಅವರು ಒಳ್ಳೆಯ ವಿರೋಧ ಪಕ್ಷದ ನಾಯಕನಾಗಿ ಸರ್ಕಾರವನ್ನು ತಿದ್ದುವಂತಹ ಕೆಲಸ ಮಾಡಲಿ.

ಟೀಕೆ ಮಾಡೋದಲ್ಲ, ತಿದ್ದುವಂತಹ ಕೆಲಸ ಮಾಡಬೇಕು. ಬಹಳ ಚಿಕ್ಕವಯಸ್ಸಿಗೆ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಬಿಜೆಪಿ ಅವರನ್ನು ಸಿಎಂ ಮಾಡಿದೆ. ದೇವೇಗೌಡರನ್ನು ಪ್ರಧಾನಿ ಮಾಡಿದೆ. ಅವರಿಗಿರುವ ಅಪಾರವಾದ ಅನುಭವದ ಮೂಲಕ ಸರ್ಕಾರವನ್ನು ತಿದ್ದುವ ಕೆಲಸ ಮಾಡಬೇಕು. ಅವರು ಬೇಕಿದರೆ ಮಾರ್ಗದರ್ಶನ ನೀಡಲಿ ಸಾಕು ಎಂದರು.

ಇನ್ನು ಕಾಂಗ್ರೆಸ್ ನಲ್ಲಿ ಭಿನ್ನಮತದ ಬಗ್ಗೆ ಉತ್ತರ ನೀಡಿದ ಡಿ ಕೆ ಶಿವಕುಮಾರ್ ಬಣ ರಾಜಕೀಯ, ಭಿನ್ನಮತ ಇರುವುದು ಬಿಜೆಪಿಯಲ್ಲಿ, ಹೀಗಾಗಿ ಇನ್ನೂ ಅವರಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಸರ್ಕಾರ ರಚನೆಯಾಗಿ ಆರು ತಿಂಗಳಾದರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಯಾವುದಾದರೂ ರಾಜ್ಯವನ್ನು ನೀವು ನೋಡಿದ್ದೀರಾ ಎಂದು ಕೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com