ಸಿದ್ದರಾಮಯ್ಯ ಮನೆಗೆ ಕೋಟಿ ಬೆಲೆಯ ಸೋಫಾ ಸೆಟ್‌ ಗಿಫ್ಟ್‌: ರಾಜ್ಯದಲ್ಲಿ ಡುಪ್ಲಿಕೇಟ್ ಮುಖ್ಯಮಂತ್ರಿ; ಸಿಎಂ ಕಾಲೆಳೆದ ಕುಮಾರಸ್ವಾಮಿ

ರಾಜ್ಯ​ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ರಾಜ್ಯ​ ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ, ತೆಲಂಗಾಣದಲ್ಲಿ ಚುನಾವಣಾ ಭಾಷಣ ಮಾಡಲು ಹೋಗಿ ಅಪಮಾನಕ್ಕೀಡಾಗಿ ಬಂದಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯ ಅಂಶಗಳಲ್ಲಿ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಬದುಕಿನ ಭಾಗ್ಯ ತೆರೆದಿದೆ ಎಂಬ ಭಜನೆ ಕೇಳುತ್ತಿದ್ದೇವೆ. ಇದಕ್ಕೆ ಜನ ಮರುಳಾಗಬಾರದು ಎಂದು ಹೇಳಿದರು.

'ರಾಜ್ಯದಲ್ಲಿ ಡುಪ್ಲಿಕೇಟ್ ಮುಖ್ಯಮಂತ್ರಿ ಅಂತ ಇದ್ದಾರೆ. ಅವರು ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿ ನಗೆಪಾಟಲಿಗೀಡಾಗಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂವು ಮುಡಿಸಿದ್ದಾರೆ. ಈಗ ತೆಲಂಗಾಣದಲ್ಲಿ ಹೋಗಿ ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ' ಎಂದು ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೇ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರು ತೆಲಂಗಾಣದಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲೇ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ'' ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯಗೆ ಸಚಿವರೊಬ್ಬರು ನೀಡಿರುವ ವಿದೇಶಿ ಸೋಫಾ ಸೆಟ್‌  ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಇದು 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುವ ಗಿಫ್ಟ್ ಎಂದೂ ಹೇಳಿದ್ದಾರೆ. ಅಲ್ಲದೆ, ಇದು ಇದು ಹ್ಯೂಬ್ಲೋಟ್‌ ವಾಚ್‌ನ ಅಪ್ಡೇಟೆಡ್‌ ವರ್ಷನ್ ಎಂದು ಕಾಲೆಳೆದಿದ್ದಾರೆ.

ಸಿಎಂ ಕಚೇರಿಗೆ ಒಂದು ಕಡೆ ಖರ್ಚು ಮಾಡುತ್ತಾ ಇದ್ದಾರೆ. ಅಲ್ಲದೆ, ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ಸೋಫಾ ಸೆಟ್ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ವಿದೇಶದಲ್ಲಿ ಸಿಗುವ ಸ್ಟಾಂಗ್ಲೆ ಅನ್ನೊ ವಿದೇಶಿ ಬ್ರಾಂಡ್ ಸೋಫಾ ಸೆಟ್‌ ಇದಾಗಿದ್ದು, 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುತ್ತದೆ. ಇದನ್ನು ಯಾರೋ ಆಪ್ತ ಸಚಿವರೇ ಕೊಟ್ಟಿದ್ದಾರೆ ಎಂಬ ಮಾಹಿತಿಯೂ ಬಂದಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಸಿಎಂ ಮನೆಯಲ್ಲಿ ಕಾನ್ಫರೆನ್ಸ್ ಹಾಲ್ ಅನ್ನು ನಿರ್ಮಾಣ ಮಾಡಿದ್ದಾರೆ. ಅದಕ್ಕೆ‌ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ. ಅಲ್ಲಿಗೆ ಮಾಧ್ಯಮದವರನ್ನು ಒಳಗೆ ಬಿಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಮೂರು ಕೋಟಿ ರೂಪಾಯಿಗಿಂತಲೂ ಹೆಚ್ಚೋ ಏನೋ ಎಂಬುದು ಗೊತ್ತಿಲ್ಲ. ಈ ಎಲ್ಲರದ ಬಗ್ಗೆ ಸತ್ಯ ಹರಿಶ್ಚಂದ್ರರೇ ಉತ್ತರ ಕೊಡಬೇಕು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಕರ್ನಾಟಕದಲ್ಲಿ 5,71,665 ಕೋಟಿ ರೂಪಾಯಿ ಸಾಲ ಈಗ ಇದೆ. ಇನ್ನು 85815 ಕೋಟಿ ರೂಪಾಯಿ ಸಾಲದ ಗುರಿ ಇಟ್ಟುಕೊಂಡಿದ್ದೀರಿ. ಸಾಲಕ್ಕೆ 56 ಕೋಟಿ ರೂಪಾಯಿ ಕಟ್ಟಬೇಕು. ಇದನ್ನು ನಿಮ್ಮ ಅಧಿಕಾರಿಗಳೇ ಹೇಳುತ್ತಿದ್ದಾರೆ. ಬರದಿಂದ ರಾಜ್ಯ ಅಸ್ತವ್ಯಸ್ತವಾಗಿದೆ. ಆದರೆ, ರಾಜ್ಯದಲ್ಲಿ ದುಡ್ಡಿಗೇನು ಬರ ಇಲ್ಲ, ಬ್ಲಾಕ್ ಮನಿಗೇನೂ ಕಡಿಮೆ ಇಲ್ಲ. ಒಬ್ಬರ ಮನೆಯಲ್ಲಿ 42 ಕೋಟಿ ರೂಪಾಯಿ ಸಿಕ್ಕಿದೆಯಲ್ಲವೇ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com