ಜೆಡಿಎಸ್, ಬಿಜೆಪಿ ಜೊತೆ ವಿಲೀನವಾದರೆ ಆಶ್ಚರ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಕೇಸರಿ ಪಕ್ಷದೊಂದಿಗೆ ವಿಲೀನಗೊಂಡರೂ ಆಶ್ಚರ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಮುಂದಿನ ದಿನಗಳಲ್ಲಿ ಕೇಸರಿ ಪಕ್ಷದೊಂದಿಗೆ ವಿಲೀನಗೊಂಡರೂ ಆಶ್ಚರ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ಮಾಜಿ ಶಾಸಕರಾದ ಡಿಸಿ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಕಾಂಗ್ರೆಸ್ ಸೇರಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಜೆಡಿಎಸ್, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ "ಕೋಮುವಾದಿ" ಪಕ್ಷವಾಗಿದೆ. ಹೀಗಾಗಿ ಅದರ ಹೆಸರಿನಿಂದ 'ಸೆಕ್ಯುಲರ್' ಪದವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

“ಮುಂದಿನ ದಿನಗಳಲ್ಲಿ ದೇಶದಲ್ಲಿ ರಾಜಕೀಯ ಧ್ರುವೀಕರಣ ಮತ್ತು ಮತಗಳ ಧ್ರುವೀಕರಣ ನಡೆಯಲಿದೆ, ಒಂದು ಕಡೆ ಕೋಮುವಾದಿ ಶಕ್ತಿಗಳು ಮತ್ತು ಇನ್ನೊಂದು ಕಡೆ ಜಾತ್ಯತೀತ ಶಕ್ತಿಗಳು. ಬಿಜೆಪಿ ಎಂದಿಗೂ ಹಿಂದುತ್ವ ಮತ್ತು ಹಿಂದೂ ರಾಷ್ಟ್ರ ರಚಿಸುವ ಅವರ ಯೋಜನೆಯಿಂದ ಹೊರಬರುವುದಿಲ್ಲ. ದೇವೇಗೌಡ ಮತ್ತು ಅವರ ಕುಟುಂಬವೂ ಬಿಜೆಪಿಯೊಂದಿಗೆ ಸೇರಿಕೊಂಡಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜೆಡಿಎಸ್ ಒಂದು ರಾಜಕೀಯ ಪಕ್ಷವಲ್ಲ. ಅದು ದೇವೇಗೌಡ ಮತ್ತು ಅವರ ಕುಟುಂಬದ ಪಕ್ಷ. ನಾಳೆ ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾದರೆ ಆಶ್ಚರ್ಯವಿಲ್ಲ.. ದೇವೇಗೌಡರು ಇರುವವರೆಗೂ ಪ್ರತ್ಯೇಕ ರಾಜಕೀಯ ಪಕ್ಷವಾಗಿ ಉಳಿಯುತ್ತದೆ. ನಂತರ ಬಿಜೆಪಿಯೊಂದಿಗೆ ವಿಲೀನವಾಗುತ್ತದೆ ಎಂದರು.

ಬಿಜೆಪಿ ಅವರಿಗಿಂತ ಜೆಡಿಎಸ್ ಕುಮಾರಸ್ವಾಮಿನೇ ಹೆಚ್ಚು ಮಾತನಾಡ್ತಾರೆ. ಕುಮಾರಸ್ವಾಮಿನಾ ಬಿಜೆಪಿ ಅವರು ನಮ್ಮ ಮೇಲೆ ಛೂ ಬಿಟ್ಟಿದ್ದಾರೆ. ನೀವು ಏನೇ ಕುತಂತ್ರ ಮಾಡಿದರೂ ನಾವು ಚುನಾವಣೆಯಲ್ಲಿ ನಮ್ಮ ಗುರಿ ಸಾಧಿಸಿಯೇ ಸಾಧಿಸುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com