'ಚಿಂದಿ ಚೋರ್' ಹೇಳಿಕೆಯಿಂದ ವಿಜಯೇಂದ್ರ ಇಮೇಜ್ ಗೆ ಧಕ್ಕೆ: ಬಿಎಸ್ ವೈ ಪುತ್ರನ ಮೇಲೆ ಯತ್ನಾಳ್ ಗೆ ಏಕಿಷ್ಟು ಹೇವರಿಕೆ?

ಪಕ್ಷದ ರಾಜ್ಯಾಧ್ಯಕ್ಷನ ಬಗ್ಗೆ ಕೀಳಾಗಿ ಮಾತಾಡಿದರೆ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬಹುದೆಂಬ ಹೆದರಿಕೆ ಕೂಡ ಇಲ್ಲದಷ್ಟು ತಾತ್ಸಾರ, ಹೇವರಿಕೆ, ಜಿಗುಪ್ಸೆಯನ್ನು ಯತ್ನಾಳ್ ಮನಸಲ್ಲಿ ಇಟ್ಟುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ. 
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ
ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿಜಯೇಂದ್ರ

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ “ಚಿಂದಿ ಚೋರ್” ಹೇಳಿಕೆಯು ಹೊಸದಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಬಿ.ವೈ. ವಿಜಯೇಂದ್ರ ಅವರ ಇಮೇಜ್ ಮೇಲೆ ಶಾಶ್ವತ ಪರಿಣಾಮ ಬೀರಬಹುದು.

ಚಿಂದಿ ಚೋರ್ ಅನ್ನೋದು ಮುಂಬೈ-ಕರ್ನಾಟಕ ಪ್ರಾಂತ್ಯದಲ್ಲಿ ಕೀಳು ಬೈಗುಳವಾಗಿ ಬಳಸುವ ಪದ. ವ್ಯಕ್ತಿಯೊಬ್ಬ ಕೀಳು ದರ್ಜೆಯವ, ಚಿಂದಿ ಬಟ್ಟೆಗಳನ್ನೂ ಕಳುವು ಮಾಡಲು ಸಹ ಹೇಸದ ವ್ಯಕ್ತಿಯನ್ನು ಚಿಂದಿ ಚೋರ್ ಅನ್ನುತ್ತಾರೆ. ಬಿವೈ ವಿಜಯೇಂದ್ರ ಬಿಜೆಪಿ ರಾಜಾಧ್ಯಕ್ಷನಾಗಿ ಆಯ್ಕೆಯಾದ ಬಳಿಕ ನಡೆದ ಪದಗ್ರಹಣ ಸಮಾರಂಭದಲ್ಲಿ ಯಾಕೆ ಪಾಲ್ಗೊಳ್ಳಲಿಲ್ಲ ಎಂದು ಪತ್ರಕರ್ತರು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪ್ರಶ್ನಿಸಿದರು.

ಕೂಡಲೇ ಸಿಡುಕಿದ ಅವರು, ನಿಮಗ್ಯಾಕೆ ಅಷ್ಟು ಕಾಳಜಿ, ಇಂಥ ಪ್ರಶ್ನೆಗಳನ್ನು ಮಾಧ್ಯಮದವರು ಕೇಳಬಾರದು ಅನ್ನುತ್ತಾರೆ. ಯಾವನೋ ಚಿಂದಿ ಚೋರ್ ನನ್ನು ಅಧ್ಯಕ್ಷನೋ ಮತ್ತೊಂದೋ ಮಾಡಿ ಅವನನ್ನು ಮಾಧ್ಯಮದವರು ಆ ಹುಲಿ ಈ ಹುಲಿ ಅಂತ ಪ್ರೊಜೆಕ್ಟ್ ಮಾಡಿದರೆ ತಾನ್ಯಾಕೆ ಪ್ರತಿಕ್ರಿಯೆ ನೀಡಬೇಕು ಎಂದು ಅವರು ಹೇಳಿದ್ದರು.

ಪಕ್ಷದ ರಾಜ್ಯಾಧ್ಯಕ್ಷನ ಬಗ್ಗೆ ಕೀಳಾಗಿ ಮಾತಾಡಿದರೆ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬಹುದೆಂಬ ಹೆದರಿಕೆ ಕೂಡ ಇಲ್ಲದಷ್ಟು ತಾತ್ಸಾರ, ಹೇವರಿಕೆ, ಜಿಗುಪ್ಸೆಯನ್ನು ಯತ್ನಾಳ್ ಮನಸಲ್ಲಿ ಇಟ್ಟುಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.

ಇಂತಹ ಒಂದು ಹೇಳಿಕೆ ವ್ಯಕ್ತಿಯ ವರ್ಚಸ್ಸಿಗೆ ಧಕ್ಕೆ ತರುತ್ತದೆ, ರಾಹುಲ್ ಗಾಂಧಿಗೆ ಪಪ್ಪು ಎಂಬ ಟ್ಯಾಗ್ ಹಲವು ವರ್ಷಗಳ ಕಾಲ ಜೊತೆಯಲ್ಲಿಯೇ ಸುತ್ತುತ್ತಿತ್ತು.

ಇದು ವಿಜಯೇಂದ್ರ ಅವರ ಇಮೇಜ್ ಡ್ಯಾಮೇಜ್ ಮಾಡುವ ಪ್ರಯತ್ನ ಎಂದು ಹರೀಶ್ ಬಿಜೂರು ಹೇಳಿದ್ದಾರೆ, ಬ್ರ್ಯಾಂಡ್ ಎಂದರೆ ಅಳಿಸಲಾಗದ ಗುರುತು ಬಿಡುವುದು, ಹಸುವಿನ ಚರ್ಮದ ಮೇಲೆ ಬಿಸಿ ಕಬ್ಬಿಣದಿಂದ ಬರೆ ಹಾಕುತ್ತಾರೆ, ಇದು ಹಸುವಿನ ಮೈಮೇಲೆ ಉಳಿದು ಬಿಡುತ್ತದೆ, ಇದೂ ಹಾಗೆಯೇ.

ರಾಜಕೀಯ ವಲಯದಲ್ಲಿ, ಇದು ಧನಾತ್ಮಕ ಮತ್ತು ಋಣಾತ್ಮಕವಾದ ಹೆಸರುಗಳು ಮತ್ತು ನುಡಿಗಟ್ಟುಗಳನ್ನು ರಚಿಸುತ್ತದೆ. ‘ಚಿಂದಿ ಚೋರ್’ ನಂತೆ ‘ಪಪ್ಪು’ ಕೂಡ ಒಂದು. ಇದು ಬ್ರ್ಯಾಂಡಿಂಗ್‌ನ ಋಣಾತ್ಮಕ ಸಂದೇಶ ರವಾನಿಸುತ್ತದೆ. ಇದು ಉದ್ದೇಶಪೂರ್ವಕವಾಗಿ ವಿಜಯೇಂದ್ರ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನವಾಗಿದೆ ಎಂದು ವಿಶ್ಲೇಷಕ ಬಿ.ಎಸ್.ಮೂರ್ತಿ ಹೇಳಿದ್ದಾರೆ.

ಇದು ಯತ್ನಾಳ್ ಅವರ ಸಾಂದರ್ಭಿಕ ಹೇಳಿಕೆ ಎಂದು ಹೇಳಲಾಗದು, ಇದು ವಿಜಯೇಂದ್ರನನ್ನು ಅಪ್ರಸ್ತುತತೆಗೆ ತಳ್ಳಲು ಪ್ರಯತ್ನಿಸುತ್ತದೆ, ಇನ್ನೂ ಕೆಲವು ಬಾರಿ ಪುನರಾವರ್ತಿಸಿದರೆ ಅವರಿಗೆ ಹಾನಿಯಾಗುತ್ತದೆ ಎಂದಿದ್ದಾರೆ.

ಮೂರು ಬಾರಿ ಸಂಸದರಾಗಿರುವ ರಾಹುಲ್ ಗಾಂಧಿ ಅವರು ‘ಪಪ್ಪು’ ಎಂಬ ಟ್ಯಾಗ್ ತೊಡೆದುಹಾಕಲು 3,000 ಕಿಲೋಮೀಟರ್ ನಡೆಯಬೇಕಾಯಿತು. ಯತ್ನಾಳ್ ಅವರ ಮೆದುಳು ಮತ್ತು ನಾಲಿಗೆ ನಡುವೆ ಯಾವುದೇ ಸಂಬಂಧವಿಲ್ಲ. ಯತ್ನಾಳ್ ಜೆಡಿಎಸ್ ಸೇರಿದ್ದರು ಮತ್ತು ಮುಸ್ಲಿಂ ಮತಗಳಿಗಾಗಿ ತಲೆಗೆ ಟೋಪಿ ಹಾಕಿಕೊಂಡು ತಿರುಗುತ್ತಾರೆ, ಅವರಿಗೆ ಯಾವ ವಿಶ್ವಾಸಾರ್ಹತೆ ಇದೆ? ಎಂದು ಹೆಸರು ಹೇಳಲು ಇಚ್ಚಿಸದ ಬಿಜೆಪಿ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಯತ್ನಾಳ್ ಅವರನ್ನು ಕೇಂದ್ರ ಸಚಿವ ಸ್ಥಾನಕ್ಕೆ ಪರಿಗಣಿಸಿತ್ತು, ಈಗ 60 ರಷ್ಟು ಮತದಾರರು 40 ವರ್ಷಕ್ಕಿಂತ ಕಡಿಮೆ ಇದ್ದ ಕಾರಣ ಯುವ ಅಧ್ಯಕ್ಷರನ್ನು ನೇಮಿಸಲು ಪಕ್ಷ ನಿರ್ಧರಿಸಿತು. ಅದು ಪಕ್ಷದ ಪರಮಾಧಿಕಾರ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.

ಈ ಬೆಳವಣಿಗೆಯನ್ನು ನೋಡುತ್ತಿರುವ ವೀರಶೈವ ಮಹಾಸಭಾದ ಮುಖಂಡರು ಹೇಳಿಕೆಗೆ ಕಿಡಿಕಾರಿದ್ದಾರೆ. ನಾವು ಸಾರ್ವಜನಿಕವಾಗಿ ಕಾಮೆಂಟ್ ಮಾಡಲು ಸಾಧ್ಯವಿಲ್ಲ, ಆದರೆ ಅದನ್ನು ವೇದಿಕೆಯಲ್ಲಿ ಚರ್ಚಿಸುತ್ತೇವೆ ಎಂದು ಅವರು ಹೇಳಿದರು. ಬಿಜೆಪಿಯ ಮಾಜಿ ಸಚಿವ ಬಿ.ಶ್ರೀರಾಮುಲು ಪಕ್ಷ ಒಗ್ಗೂಡುವ ಸಮಯ ಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾನು ಯಾರನ್ನೂ ಸಾರ್ವಜನಿಕವಾಗಿ ಟೀಕಿಸಲು ಇಷ್ಟಪಡುವುದಿಲ್ಲ, ಯತ್ನಾಳ್ ಅವರು ಹಿರಿಯ ನಾಯಕರು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com