ಜಾತಿ ಸಮೀಕ್ಷೆ: ಹಿಂದುಳಿದ ವರ್ಗಗಳ ಚ್ಯಾಂಪಿಯನ್ ಸಿದ್ದರಾಮಯ್ಯಗೆ ಜೂಜಾಟವೋ, ಸುರಕ್ಷಿತ ಆಟವೋ? ಬದಲಾಗಲಿದ್ಯಾ ರಾಜಕೀಯ ಸಮೀಕರಣ!

ಒಬಿಸಿಗಳಿಗೆ ಉತ್ತಮ ಪ್ರಾತಿನಿಧ್ಯದ ಭರವಸೆ ನೀಡುವ ಮೂಲಕ ಬಿಜೆಪಿಯ ಪಾನ್-ಹಿಂದೂ-ಐಕ್ಯತಾ ತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ತಡೆಯಲು ಇದು ಕಾಂಗ್ರೆಸ್ ಗೆ ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ
By:Ramu patil
Express News Service

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಜಾತಿ ಗಣತಿ ಸಮೀಕ್ಷೆ ವರದಿ ಬಿಡುಗಡೆಯಾಗಲಿದ್ದು, ಎನ್ ಡಿಎ ಒಕ್ಕೂಟ ಎದುರಿಸಲು ಕಾಂಗ್ರೆಸ್ ಮತ್ತು ಅದರ I.N.D.I.A (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಅಲಯನ್ಸ್)  ಮೈತ್ರಿ ಕೂಟ ಜಾತಿ ಸಮೀಕ್ಷೆಯನ್ನು ಪ್ರಬಲ ರಾಜಕೀಯ ಸಾಧನವಾಗಿ ಎದುರು ನೋಡುತ್ತಿದೆ.

ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ನವೆಂಬರ್ ಅಂತ್ಯದೊಳಗೆ ತನ್ನ ಸಾಮಾಜಿಕ ಆರ್ಥಿಕ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿರುವುದರಿಂದ, ಸಿದ್ದರಾಮಯ್ಯ ಸರ್ಕಾರವು  ಬಿಜೆಪಿಯ  ಹಿಂದೂ ರಾಜಕೀಯ ತಂತ್ರದ ಮೂಲವನ್ನು ಹೊಡೆಯುವ ಸಾಧನವಾಗಿ ಬಳಸುವ ಸಾಧ್ಯತೆಯಿದೆ.

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ ನಂತರ ಗಳಿಸಿದ ಲಾಭವನ್ನು ಮತ್ತಷ್ಟು ಕ್ರೋಢೀಕರಿಸಲು  ಕಾಂಗ್ರೆಸ್  ಪ್ರಯತ್ನಿಸುತ್ತದೆ,  ನೇರವಾಗಿ BPL ಕುಟುಂಬಗಳ ಕೈಗೆ ಹಣ ನೀಡಲಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ, ಇದು ಸಾಮಾಜಿಕ ನ್ಯಾಯದ 'ಕರ್ನಾಟಕ ಮಾದರಿ' ಪ್ರದರ್ಶಿಸಲು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

I.N.D.I.A ಬ್ರಿಗೇಡ್ ಪಾಲುದಾರ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇತರ ಹಿಂದುಳಿದ ವರ್ಗಗಳ (OBC) ಜಾತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ್ದಾರೆ. ಆ ಮೂಲಕ ಎಲ್ಲಾ ಕ್ರೆಡಿಟ್ ಕರ್ನಾಟಕ ಕಾಂಗ್ರೆಸ್ ಸರ್ಕಾರ ತೆಗೆದುಕೊಳ್ಳುವುದಕ್ಕೆ ನಿತೀಶ್ ಅಡ್ಡಗಾಲು ಹಾಕಿದ್ದಾರೆ.

ಮೇ 10 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, ಕಾಂಗ್ರೆಸ್ ತನ್ನ ಕರ್ನಾಟಕ ಮಾದರಿಯ ಚುನಾವಣಾ ಪ್ರಚಾರವನ್ನು ಇತರ ರಾಜ್ಯಗಳಲ್ಲಿ ಮತ್ತು ಲೋಕಸಭೆ ಚುನಾವಣೆಯ ಸಮಯದಲ್ಲಿ  ಅನುಕರಿಸಲು ಬಯಸುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಪ್ರತಿ ಹೆಜ್ಜೆಯೂ ಲೋಕಸಭೆ ಚುನಾವಣೆಗೆ ಪಕ್ಷದ ದೊಡ್ಡ ಕಾರ್ಯತಂತ್ರ ಸೂಚಿಸುತ್ತಿದೆ.

ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಪ್ರತಿಪಾದಕರು ಮತ್ತು ಹಿಂದುಳಿದ ವರ್ಗಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಲು ಮೀಸಲಾತಿ ಕೋಟಾವನ್ನು ಹೆಚ್ಚಿಸಬೇಕೆಂದು ಬಲವಾಗಿ ವಾದಿಸುತ್ತಾರೆ. ಹೀಗಾಗಿ ಅವರು ವರದಿಯನ್ನು ಸ್ವೀಕರಿಸಿ ಮತ್ತು ಸರ್ಕಾರದ ಕ್ರಿಯಾ ಯೋಜನೆ ಜಾರಿಗೆ ತರಲು ಬಹಳಷ್ಟು ಸವಾಲು ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಇದು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಕನ್ನಡ ಸಂಕ್ಷಿಪ್ತ ರೂಪ) ದಲ್ಲಿ ತನ್ನ ಹಿಡಿತವನ್ನು ಬಲಪಡಿಸುವುದರ ಜೊತೆಗೆ, ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಕಾಂಗ್ರೆಸ್‌ನ ಪ್ರಬಲ ಒಬಿಸಿ ನಾಯಕನಾಗಿ ಸ್ಥಾನ ಪಡೆಯಲು ಸಿಎಂ ಸಿದ್ದರಾಮಯ್ಯಗೆ ಸಹಾಯ ಮಾಡಬಹುದು ಎನ್ನುವುದು ಮತ್ತೊಂದು ವಾದ.

ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ  ಶೇ. 33 ರಷ್ಟು ಮೀಸಲಾತಿ ನೀಡಲು ನ್ಯಾಯಮೂರ್ತಿ ಭಕ್ತವತ್ಸಲ ಆಯೋಗದ ಶಿಫಾರಸನ್ನು ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ಅನುಮೋದಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

2013 ಮತ್ತು 2018 ರ ನಡುವೆ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಸಾಮಾಜಿಕ-ಶಿಕ್ಷಣ ಸಮೀಕ್ಷೆ ಮಾಡಲು ಆಯೋಗ ರಚಿಸುವ  ಸಿದ್ದರಾಮಯ್ಯನವರ ನಿರ್ಧಾರವು ಈಗ ಸೂಕ್ತವಾಗಿದೆ ಎನಿಸಬಹುದು. ಆಗ ಎಚ್.ಕಾಂತರಾಜು ನೇತೃತ್ವದಲ್ಲಿ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ವ್ಯಾಪಕ ಕೆಲಸ ಮಾಡಿತ್ತು. 2018ರಲ್ಲಿ ಜನತಾದಳ (ಜಾತ್ಯತೀತ)-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಅದನ್ನು ಅಂಗೀಕರಿಸಲಾಗಿಲ್ಲ. ಜೊತೆಗೆ ಆಯೋಗದ ಕಾರ್ಯದರ್ಶಿ ವರದಿಗೆ ಸಹಿ ಮಾಡಿರಲಿಲ್ಲ. ಈಗ ಹಾಲಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಬಿಜೆಪಿ ಸರ್ಕಾರ ನೇಮಕ ಮಾಡಿತ್ತು. ನವೆಂಬರ್ ಅಂತ್ಯದಲ್ಲಿ ನಿವೃತ್ತಿಯಾಗುವ ಮೊದಲು ಅಂದರೆ- ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ವರದಿಯನ್ನು ಸಲ್ಲಿಸಲು ಸಿದ್ಧರಾಗಿದ್ದಾರೆ.

ಒಬಿಸಿಗಳಿಗೆ ಉತ್ತಮ ಪ್ರಾತಿನಿಧ್ಯದ ಭರವಸೆ ನೀಡುವ ಮೂಲಕ ಬಿಜೆಪಿಯ ಪಾನ್-ಹಿಂದೂ-ಐಕ್ಯತಾ ತಂತ್ರ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸನ್ನು ತಡೆಯಲು ಇದು ಕಾಂಗ್ರೆಸ್ ಗೆ ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕರ ನಿರೀಕ್ಷೆಯಾಗಿದೆ. ವರದಿಯ ವಿವರಗಳು ಇನ್ನೂ ತಿಳಿದಿಲ್ಲವಾದರೂ, ಒಬಿಸಿಗಳ ಸಂಖ್ಯೆಯು ಇತರ ಸಮುದಾಯಗಳಿಗಿಂತ ಹೆಚ್ಚು ಎಂದು  ಹೇಳಲಾಗುತ್ತಿದೆ.

ಆದರೆ, ಇದು  ಜೀರೋ ರಿಸ್ಕ್ ತಂತ್ರವಲ್ಲ, ವಿಶೇಷವಾಗಿ ನೀವು ಯಾವುದೇ ನಿರ್ಧಾರವನ್ನು ಅದರ ಚುನಾವಣಾ ಪರಿಣಾಮಗಳ ದೃಷ್ಟಿಕೋನದಿಂದ ಅಳೆದು ತೂಗಬೇಕಾಗುತ್ತದೆ ರಾಜಕೀಯವಾಗಿ ಪ್ರಬಲವಾಗಿರುವ ಲಿಂಗಾಯತರು ಮತ್ತು ಒಕ್ಕಲಿಗರಲ್ಲಿ ಅಸಮಾಧಾನವನ್ನು ಹುಟ್ಟುಹಾಕುವ ಮೂಲಕ ವರದಿಯು ಪಾಂಡೋರ ಬಾಕ್ಸ್  ತೆರೆಯಬಹುದು.

ಒಕ್ಕಲಿಗ ಮತ್ತು ಲಿಂಗಾಯತ ಎರಡು ಸಮುದಾಯಗಳಲ್ಲಿ ಒಂದನ್ನು ವಿರೋಧಿಸಲು ಕಾಂಗ್ರೆಸ್‌ಗೆ ಖಂಡಿತ ಸಾಧ್ಯವಿಲ್ಲ. ಸಿದ್ದರಾಮಯ್ಯನವರ ಆಡಳಿತದಲ್ಲಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳು ಕಚ್ಚಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಹಿರಿಯ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಪ್ರಕಾರ ಪಕ್ಷವು ತನ್ನ ನಿಲುವಿನ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ಸಮೀಕ್ಷೆಯ ವಿಷಯಗಳ ಭಾಗಗಳನ್ನು ಆಧರಿಸಿದ ವರದಿಗಳು ಸೋರಿಕೆಯಾದಾಗ ಎರಡೂ ಪ್ರಬಲ ಸಮುದಾಯಗಳ ನಾಯಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದರಿಂದ ಜಾತಿ ಸಮೀಕ್ಷೆಯ ಬಗ್ಗೆ ಸಿಎಂ ಮರುಚಿಂತನೆ ನಡೆಸುವ ಸಾಧ್ಯತೆಗಳಿವೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಗೆ ಒಕ್ಕಲಿಗರ ಬೆಂಬಲವಿದ್ದರೆ, ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.  ಕಾಂಗ್ರೆಸ್ ತನ್ನ 2019 ಕ್ಕಿಂತ ಉತ್ತಮ ಮತ ಗಳಿಸಬೇಕಾದರೆ ಕಾಂಗ್ರೆಸ್ ಗೆ  OBC ಗಳ ಜೊತೆಗೆ ಈ ಎರಡೂ ಪ್ರಬಲ ಸಮುದಾಯಗಳ ಬೆಂಬಲದ ಅಗತ್ಯವಿದೆ.

ಅಲ್ಲದೆ, ಪಿಎಂ ಮೋದಿ (ಒಬಿಸಿಗೆ ಸೇರಿದವರು) ವರ್ಚಸ್ಸಿನ ಮೇಲೆ ಹೆಚ್ಚು ಅವಲಂಬಿತವಾಗಿರುವ ಬಿಜೆಪಿ, ಕಾಂಗ್ರೆಸ್‌ನ ಒಬಿಸಿ  ವ್ಯಾಖ್ಯಾನ ಎದುರಿಸಲು ಮೋದಿ ಅವರನ್ನು ದೇಶದ ಏಕೈಕ ಅತಿ ಪ್ರಭಾವಿ ಒಬಿಸಿ ನಾಯಕ ಎಂದು ಬಿಂಬಿಸುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಕಾಂಗ್ರೆಸ್‌ನ ಏಕೈಕ ಒಬಿಸಿ ನಾಯಕನಲ್ಲ,  ಪಕ್ಷವು ಯಾವುದೇ ಒಬಿಸಿ ನಾಯಕನನ್ನು ಡಿಸಿಎಂ ಮಾಡಿಲ್ಲ ಎಂದು ರಾಜ್ಯ ಬಿಜೆಪಿ  ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಹೇಳಿದ್ದಾರೆ.

ಹೀಗಾಗಿ ಹಿಂದುಳಿದ ವರ್ಗಗಳ ಚಾಂಪಿಯನ್ ಆಗಿ ಸಿದ್ದರಾಮಯ್ಯನವರ ಬದ್ಧತೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಲಾಭಕ್ಕಾಗಿ ವರದಿಯನ್ನು ಬಳಸಿಕೊಳ್ಳುವ ಅವರ ಚಾಣಾಕ್ಷತೆಗೆ ಇದು  ಅಗ್ನಿಪರೀಕ್ಷೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com