ಮಾತು ಬದಲಿಸುವ ನಿಮ್ಮ ನಾಲಿಗೆ ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚುತ್ತಿದೆ; ಬಿಎಸ್ ವೈ ಹೇಳಿಕೆಯನ್ನು ನಿಜ ಮಾಡುತ್ತಿದ್ದೀರಿ!

ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ, ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ ಎಂದು ಲೇವಡಿ ಮಾಡಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪರಸ್ಪರ ವಾಗ್ದಾಳಿ ಜೋರಾಗುತ್ತಿದೆ. ಮೊನ್ನೆಯಷ್ಟೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದರು. ನನ್ನ ನಂಬಿಸಿ ಶಿವಕುಮಾರ್ ಕುತ್ತಿಗೆ ಕುಯ್ದರು ಎಂದಿದ್ದರು.

ಕುಮಾರಸ್ವಾಮಿ ಅವರ ಆರೋಪಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದೆ, ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್,  ಎಚ್.ಡಿ ಕುಮಾರಸ್ವಾಮಿ ಅವರೇ ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ. ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ, ಅಂದು ಶಾಸಕರನ್ನು ಅಪಹರಿಸಿ ಸ್ಪೆಷಲ್ ಫ್ಲೈಟ್ ಹತ್ತಿಸಿ ಕಳಿಸಿದವರೊಂದಿಗೆ ಇಂದು ಕುಳಿತು ನಾಲಿಗೆ ಹೊರಳಿಸುತ್ತಿರುವ ನಿಮಗೆ ಕನಿಷ್ಠ ಲಜ್ಜೆ ಎಂಬುದಿಲ್ಲದಾಗಿದ್ದು ದುರಂತ ಎಂದು ಲೇವಡಿ ಮಾಡಿದೆ.

ಕುಮಾರಸ್ವಾಮಿಯವರೇ, ನಿಮ್ಮ ಪಕ್ಷದಲ್ಲಿ ನಿಮ್ಮ ಕುಟುಂಬವಲ್ಲದೆ ಬೇರೆ ಇನ್ಯಾರಿಗಾದರೂ ಉಸಿರಾಡಲು ಬಿಟ್ಟಿದ್ದೀರಾ? ಸಿದ್ದರಾಮಯ್ಯನವರಿಗೆ ದ್ರೋಹ ಎಸಗಿದಿರಿ, ಹೆಚ್ ವಿಶ್ವನಾಥ್ ಅವರಿಗೆ ದ್ರೋಹ ಮಾಡಿದಿರಿ, ಈಗ ಸಿಎಂ ಇಬ್ರಾಹಿಂ ಅವರನ್ನು ಮೂಲೆಗುಂಪು ಮಾಡಿದಿರಿ, ಬೆಂಬಲಿಸಿದ ಜಾತ್ಯತೀತ ಸಿದ್ಧಾಂತದ ಮತದಾರರು ಹಾಗೂ ಅಲ್ಪಸಂಖ್ಯಾತರಿಗೆ ವಂಚಿಸಿದಿರಿ. ಹಿಂದೆ ನಿಮ್ಮನ್ನು ಹಾಗೂ ನಿಮ್ಮ ಪಕ್ಷವನ್ನು ಬೆಳೆಸಿದ ಯಾರ ಬಗ್ಗೆಯೂ ನಿಮ್ಮಲ್ಲಿ ಕೃತಜ್ಞತೆಯಾಗಲಿ, ಉಪಕಾರ ಸ್ಮರಣೆಯಾಗಲಿ ಇಲ್ಲ. ನಿಮ್ಮ ಕೈಗೆ ಅಧಿಕಾರ ಕೊಟ್ಟವರ ಬಗ್ಗೆ ಕನಿಷ್ಠ ಗೌರವವೂ ಇಲ್ಲ. ಕುಮಾರಸ್ವಾಮಿ ಎಂದರೆ ಅವಕಾಶವಾದಿ, ಗೋಸುಂಬೆ ಬುದ್ಧಿಯ ರಾಜಕಾರಿಣಿ ಎಂದು ರಾಜ್ಯದ ಜನತೆಗೆ ಅರಿವಾಗಿದೆ ಎಂದಿದೆ.

ಡಿ ಕೆ ಶಿವಕುಮಾರ್ ಅವರು ನಿಮ್ಮನ್ನು ಬೆಂಬಲಿಸಿ ಸಿಎಂ ಕುರ್ಚಿಯ ಮೇಲೆ ಕೂರಿಸಿದ್ದಾಗ ಬಿಎಸ್ ಯಡಿಯೂರಪ್ಪ ಅವರು ಒಂದು ಮಾತು ಹೇಳಿದ್ದರು. ಕುಮಾರಸ್ವಾಮಿಯನ್ನು ನಂಬಬೇಡ ಶಿವಕುಮಾರ್, ಅವರು ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ ಎಂದಿದ್ದರು. ಅಂದು BSY ಅವರು ಹೇಳಿದ ಮಾತನ್ನು ಇಂದು ನಿಜ ಮಾಡುತ್ತಿದ್ದೀರಿ ಅಲ್ಲವೇ? ಅಧಿಕಾರ ಅನುಭವಿಸಿ BSY ಅವರಿಗೂ ವಚನಭ್ರಷ್ಟರಾಗಿ ವಂಚಿಸಿದ್ದಿರಿ, ಈಗ ಡಿ ಕೆ ಶಿವಕುಮಾರ್ ಅವರಿಗೂ ವಂಚಿಸುತ್ತಿದ್ದೀರಿ ಎಂದು ಕಾಂಗ್ರೆಸ್ ಟೀಕಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com