ಒರಿಜಿನಲ್ ಜೆಡಿಎಸ್ ಎಂದು ಅವರು ಬೋರ್ಡ್ ಹಾಕಿಕೊಳ್ಳಲಿ; ಇಂತಹ 'ಸಿಲ್ಲಿ' ವಿಚಾರಕ್ಕೆ ತಲೆಕೆಡಿಸಿಕೊಂಡು ಬರಬೇಡಿ: ಇಬ್ರಾಹಿಂಗೆ ಎಚ್.ಡಿ.ಕೆ ಟಾಂಗ್

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ
ಸಿಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ  ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಿಮಗೆ ಅದು ದೊಡ್ಡದಾಗಿ ಕಾಣುತ್ತಿದೆ. ಏನು ಸರಿ ಮಾಡಬೇಕೋ ಅದನ್ನು ನಾವು ಮಾಡುತ್ತೇವೆ.. ಅವರೇ ಒರಿಜಿನಲ್ ಎಂದು ಬೋರ್ಡ್ ಹಾಕಿಕೊಳ್ಳಲಿ. ಅವರೇ ಒರಿಜಿನಲ್ ಎಂದು ಬರೆದುಕೊಳ್ಳಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಹಾಗೂ ನಿಖಿಲ್ ಪಕ್ಷದಿಂದ ಉಚ್ಚಾಟನೆ ಪ್ರಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ಅವರಿಗೆ ಬಿಟ್ಟಿದ್ದು. ದಯವಿಟ್ಟು ಇಂತಾ ಸಿಲ್ಲಿ ವಿಚಾರಕ್ಕೆ ಬರಬೇಡಿ. ನಮಗೆ ಏನು ಮಾಡಬೇಕೊ, ಸರಿ ಮಾಡುತ್ತೇವೆ. ನೀವು ತಲೆಕೆಡಿಸಿಕೊಂಡು ಬಂದಿದ್ದೀರಾ? ಅವರು ಫ್ರೀ ಇದ್ದಾರೆ ಮಾತಾಡ್ಕೊಳ್ಳಿ. ನಮ್ಮ ಪಕ್ಷದಲ್ಲಿ ಇರುವ ಹಿರಿಯರು ತೀರ್ಮಾನ ತೆಗೆದುಕೊಳ್ಳುತ್ತಾರೆ. ನೀವು ಯಾಕೆ ವರಿ ಮಾಡಿಕೊಳ್ಳುತ್ತೀರಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಬಿಜೆಪಿ-ದಳದ ಮೈತ್ರಿಯಿಂದ ಮುನಿಸಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಇದೀಗ ಹೊಸದೊಂದು ದಾಳ ಉರುಳಿಸಿದ್ದಾರೆ. ಸಿಎಂ ಇಬ್ರಾಹಿಂ ಜೆಡಿಎಸ್‌ನಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದು, ಯಾವುದೇ ಸಂದರ್ಭದಲ್ಲಿ ಪಕ್ಷ ತೊರೆಯಬಹುದು ಎನ್ನಲಾಗಿತ್ತು. ಅದರೆ ಇದೀಗ ಸಿಎಂ ಇಬ್ರಾಹಿಂ ಶುರುಮಾಡಿರುವ ಹೊಸ ಆಟ ದಳಪತಿಗಳಿಗೆ ಸವಾಲ್ ಎಸೆದಿದೆ.

ನಮ್ಮದೇ ಒರಿಜಿನಲ್ ಜೆಡಿಎಸ್ ಬಿಜೆಪಿಗೆ ಬೆಂಬಲ ಇಲ್ಲ ಎಂದಿರುವ ಇಬ್ರಾಹಿಂ, ನಾನೇ ರಾಜ್ಯಾಧ್ಯಕ್ಷ. ನಾನೇಕೆ ಪಕ್ಷ ಬಿಡಲಿ. ನಾನು ಪಕ್ಷ ಬಿಡಲ್ಲ, ಬಿಜೆಪಿ ಜೊತೆಗೂ ಹೋಗಲ್ಲ ಶಾಸಕರ ನಿರ್ಧಾರ ಏನು ಕಾದು ನೋಡಿ ಎಂದು ಟ್ವಿಸ್ಟ್ ಕೊಟ್ಟಿದ್ದಾರೆ. ಹೀಗಾಗಿ ಈ ಬಗ್ಗೆ ಜೆಡಿಎಸ್​ನಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com