ಎರಡೂವರೆ ವರ್ಷದ ನಂತರ ಡಿಕೆಶಿ ಸಿಎಂ: ಪಕ್ಷದಲ್ಲಿ ತೀವ್ರ ಸಂಚಲನ ಮೂಡಿಸಿದ 'ಕೈ' ಶಾಸಕನ ಹೇಳಿಕೆ!

ಎರಡೂವರೆ ವರ್ಷಗಳ ಆಡಳಿತದ ನಂತರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ(ರವಿ ಗಾಣಿಗ) ಅವರು ಹೇಳಿದ್ದು, ಆಡಳಿತ ಪಕ್ಷದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್
ಸಿಎಂ ಸಿದ್ದರಾಮಯ್ಯ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಎರಡೂವರೆ ವರ್ಷಗಳ ಆಡಳಿತದ ನಂತರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ(ರವಿ ಗಾಣಿಗ) ಅವರು ಹೇಳಿದ್ದು, ಆಡಳಿತ ಪಕ್ಷದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಈ ಮಧ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಕೆಲವು ಸಚಿವರು ಪ್ರತಿಪಾದಿಸಿದ್ದು, ಇನ್ನು ಕೆಲವರು ಇದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.

ಅಲ್ಲದೆ, ಶುಕ್ರವಾರ ರಾತ್ರಿ ಗೃಹ ಸಚಿವ ಜಿ ಪರಮೇಶ್ವರ ಅವರ ನಿವಾಸದಲ್ಲಿ ನಡೆದ ಭೋಜನಕೂಟದಲ್ಲಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾಗವಹಿಸಿದ್ದರು. ಆದರೆ ಈ ಭೋಜನಕೂಟದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಟ್ಟಿರುವುದು  ರಾಜಕೀಯ ವಲಯದಲ್ಲಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

'ಇಂತಹ ಊಹಾಪೋಹಗಳಿಗೆ ಯಾವುದೇ ಅರ್ಥ ಇಲ್ಲ... ಸಿದ್ದರಾಮಯ್ಯ ಐದು ವರ್ಷ ಇರ್ತಾರೆ... ಸಿಎಂ ಹುದ್ದೆ ಖಾಲಿ ಇಲ್ಲ. ಅವರು ಸಿಎಂ ಅಲ್ಲವೇ?... ಅವರೇ ಸಿಎಂ'' ಎಂದು ಸಿದ್ದರಾಮಯ್ಯ ಆಪ್ತರಾದ ಮಹದೇವಪ್ಪ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.

"ನಾವು ಊಟಕ್ಕೆ ಹೋಗಿದ್ದೆವು, ಅದರಲ್ಲಿ ವಿಶೇಷವೇನೂ ಇಲ್ಲ..... ಬೇಟಿ ಮಾಡಿ ಊಟ ಮಾಡಿದ್ದು ಬಿಟ್ಟರೆ ಬೇರೇನೂ ಇರಲಿಲ್ಲ." ಶಿವಕುಮಾರ್ ಸಭೆಗೆ ಏಕೆ ಬರಲಿಲ್ಲ ಎಂಬ ಪ್ರಶ್ನೆಗೆ, "ನನಗೆ ಗೊತ್ತಿಲ್ಲ, ಡಾಕ್ಟರ್ (ಪರಮೇಶ್ವರ) ಊಟಕ್ಕೆ ಕರೆದಿದ್ದರು, ನಾವು ಊಟ ಮಾಡಿದ್ದೇವೆ. ಅಷ್ಟೆ" ಎಂದು ಮಹದೇವಪ್ಪ ಅವರು ಹೇಳಿದ್ದಾರೆ.

ಸಿಎಂ ಬದಲಾವಣೆ ಹಾಗೂ ತಮ್ಮನ್ನು ಉನ್ನತ ಹುದ್ದೆಗೆ ಪರಿಗಣಿಸುವ ಕುರಿತು ವರದಿಗಾರರ ಯಾವುದೇ ಪ್ರಶ್ನೆಗೆ ಉತ್ತರಿಸಲು ಪರಮೇಶ್ವರ ನಿರಾಕರಿಸಿದ್ದಾರೆ.

ಇನ್ನು ನಿವಾಸದಲ್ಲಿ ನಡೆದ ಭೋಜನಕೂಟ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಆಕಸ್ಮಿಕವಾಗಿ ಒಟ್ಟಿಗೆ ಊಟ ಮಾಡಲು ಭೇಟಿಯಾಗಿದ್ದೇವೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಐದು ವರ್ಷ ಇರಬೇಕೆಂಬುದು ನನ್ನ ಆಸೆ. ಆದರೆ ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಹೇಳಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಸಿದ್ದರಾಮಯ್ಯ ಅವರು ಮೇ 20 ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ವರ್ಷದ ಮೇನಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು ಮತ್ತು ನಂತರ ಕಾಂಗ್ರೆಸ್ ಡಿಕೆ ಶಿವಕುಮಾರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ತಲಾ ಎರಡೂವರೆ ವರ್ಷ ಮುಖ್ಯಮಂತ್ರಿ ಎಂಬ ಸೂತ್ರದ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲಾಗಿದೆ ಎಂಬ ವರದಿಗಳು ಬಂದಿವೆ. ಅದರಂತೆ ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಅವರ ಆಪ್ತ ಶಾಸಕರು ಹೇಳುತ್ತಿದ್ದಾರೆ. ಆದರೆ ಪಕ್ಷ ಇದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.

ಇನ್ನು ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಸಿಎಂ ಬದಲಾಗಬೇಕೋ ಅಥವಾ ಮುಂದುವರಿಯಬೇಕೋ ಎಂಬುದನ್ನು ಹೈಕಮಾಂಡ್ ನಿರ್ಧರಿಸಬೇಕು ಮತ್ತು ಸ್ಪಷ್ಟಪಡಿಸಬೇಕು; ಅದು ನಮ್ಮ ಮಟ್ಟದಲ್ಲಿ ನಿರ್ಧಾರವಾಗುವಂತದಲ್ಲ ಎಂದಿದ್ದಾರೆ.

ಶಾಸಕಾಂಗ ಪಕ್ಷ, ಹೈಕಮಾಂಡ್ ಇದ್ದು, ಸೂಕ್ತ ಸಮಯದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ ಎಂದು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅವರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ 50ಕ್ಕೂ ಹೆಚ್ಚು ಮಂದಿ ಸಿಎಂ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಈ ಮಧ್ಯೆ, ಪಕ್ಷದ ಆಂತರಿಕ ವಿಷಯಗಳಿಗೆ ಅಥವಾ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಪಕ್ಷದ ಶಾಸಕರಿಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಸೂಚಿಸಿದ್ದಾರೆ.

"ಇದು ಕೊನೆಯ ಎಚ್ಚರಿಕೆ ಮತ್ತು ಮನವಿ ಎರಡೂ ಆಗಿದ್ದು, ಮುಂದೆ ಇಂತಹ ಹೇಳಿಕೆಗಳನ್ನು ನೀಡಿದರೆ, ನನಗೆ ನೋಟಿಸ್ ನೀಡುವುದು ಅನಿವಾರ್ಯ" ಡಿಕೆಶಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com