ಮೂರು ಡಿಸಿಎಂ ಸ್ಥಾನಕ್ಕೆ ಬೇಡಿಕೆ: ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಇನ್ನೂ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ತಮ್ಮ ಸಂಪುಟದ ಸಚಿವರ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ...
Published: 17th September 2023 05:09 PM | Last Updated: 17th September 2023 05:09 PM | A+A A-

ಮುಖ್ಯಮಂತ್ರಿ ಸಿದ್ದರಾಮಯ್ಯ
ಕಲಬುರಗಿ: ರಾಜ್ಯದಲ್ಲಿ ಇನ್ನೂ ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು ಎಂಬ ತಮ್ಮ ಸಂಪುಟದ ಸಚಿವರ ಬೇಡಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಕುರಿತು ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧ ಎಂದು ಭಾನುವಾರ ಹೇಳಿದ್ದಾರೆ.
ರಾಜ್ಯದಲ್ಲಿ ಇನ್ನೂ ಮೂವರು ಡಿಸಿಎಂಗಳನ್ನು ಮಾಡಬೇಕು ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಶನಿವಾರ ಹೇಳಿದ್ದರು ಮತ್ತು 2024 ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಗೆ ಈ ಸಂಬಂಧ ಪತ್ರ ಬರೆಯುವುದಾಗಿ ತಿಳಿಸಿದ್ದರು.
ಇದನ್ನು ಓದಿ: ಇನ್ನೂ ಮೂರು ಡಿಸಿಎಂ ಸ್ಥಾನಗಳ ಸೃಷ್ಟಿಸಿ: 'ಕೈ' ಪಾಳಯದಲ್ಲಿ ಸಂಚಲನ ಸೃಷ್ಟಿಸಿದ ಸಚಿವ ರಾಜಣ್ಣ ಹೇಳಿಕೆ!
ಇದು ಸಚಿವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಅದನ್ನು ಪಕ್ಷದ ನಾಯಕತ್ವದ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದ ಸಿಎಂ, ಈ ಬಗ್ಗೆ ತಾವು ಯಾವುದೇ ಹೇಳಿಕೆ ನೀಡುವುದಿಲ್ಲ ಮತ್ತು ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಣ್ಣ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸಬೇಕಾಗಿದೆ. ಒಬ್ಬ ಉಪಮುಖ್ಯಮಂತ್ರಿ ಸಾಕು ಎಂದು ಹೈಕಮಾಂಡ್ ಹೇಳಿತ್ತು ಮತ್ತು ಒಬ್ಬರನ್ನು ನೇಮಿಸಿದೆ. ಇನ್ನೂ ಮೂರು ಡಿಸಿಎಂ ಸ್ಥಾನಕ್ಕಾಗಿ ಅವರು (ರಾಜಣ್ಣ) ಹೈಕಮಾಂಡ್ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ಮಾತನಾಡಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನನ್ನ ಬಳಿ ಏನೂ (ಹೇಳಲು) ಇಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಹೈಕಮಾಂಡ್ ಏನೇ ನಿರ್ಧಾರ ತೆಗೆದುಕೊಂಡರೂ ನಾನು ಅದನ್ನು ಪಾಲಿಸುತ್ತೇನೆ ಎಂದರು.