ಬೆಂಗಳೂರು ಸೆಂಟ್ರಲ್: ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ವಿರುದ್ಧವೇ ಸ್ವಪಕ್ಷೀಯರ ಕೆಲಸ?

ತೆಲಂಗಾಣ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮನ್ಸೂರ್ ಖಾನ್ ಈ ಬಾರಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಹಾಲಿ ಹಾಗೂ ಮೂರು ಬಾರಿ ಸಂಸದರಾಗಿದ್ದ ಪಿಸಿ ಮೋಹನ್ ಗೆ ಸ್ಪರ್ಧೆ ಕಠಿಣವಾಗುವ ನಿರೀಕ್ಷೆ ಇದೆ.
ಮನ್ಸೂರ್ ಖಾನ್
ಮನ್ಸೂರ್ ಖಾನ್

ಬೆಂಗಳೂರು: ತೆಲಂಗಾಣ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮನ್ಸೂರ್ ಖಾನ್ ಈ ಬಾರಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಹಾಲಿ ಹಾಗೂ ಮೂರು ಬಾರಿ ಸಂಸದರಾಗಿದ್ದ ಪಿಸಿ ಮೋಹನ್ ಗೆ ಸ್ಪರ್ಧೆ ಕಠಿಣವಾಗುವ ನಿರೀಕ್ಷೆ ಇದೆ. ಆದರೆ ಕೆಲವು ಪಕ್ಷದ ನಾಯಕರು ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ತೊಡಗಿಸಿಕೊಂಡಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುತ್ತಿದ್ದರೂ ಅವರೆಲ್ಲ ಅವರಿಗೆ ಬೆಂಬಲ ನೀಡುತ್ತಿದ್ದಾರೆಯೇ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಮಾಜಿ ರಾಜ್ಯಸಭಾ ಸದಸ್ಯ ಮತ್ತು ಉಪಸಭಾಪತಿ ರೆಹಮಾನ್ ಖಾನ್ ಅವರ ಪುತ್ರರಾಗಿರುವ ಮನ್ಸೂರ್ ಖಾನ್ ಆಯ್ಕೆಯಾದರೆ, ಪಕ್ಷದಲ್ಲಿ ತಮ್ಮಗಿಂತಲೂ ಎತ್ತರಕ್ಕೆ ಬೆಳೆಯಬಹುದು ಎಂದು ಕೆಲವು ಸ್ಥಳೀಯ ಮುಖಂಡರು ಭಯಪಡುತ್ತಿದ್ದು, ಅವರನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಭಿನ್ನಾಭಿಪ್ರಾಯ ಮತ್ತು ತೆರೆಮರೆಯ ಕುತಂತ್ರ ಕಾಂಗ್ರೆಸ್‌ಗೆ ದುಬಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂಎಲ್‌ಸಿ ಸಲೀಂ ಅಹಮದ್‌, "ಕಾಂಗ್ರೆಸ್‌ ಒಗ್ಗಟ್ಟಾಗಿರುವುದು ಸುಳ್ಳಲ್ಲ, ನಾವು ಹೆಚ್ಚಿನ ಒಗ್ಗಟ್ಟಿಗಾಗಿ ಶ್ರಮಿಸುತ್ತೇವೆ ಎಂದರು. 2008ರ ವಿಂಗಡಣೆಯ ನಂತರ ರಚನೆಯಾದ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್ ಗೆದ್ದಿಲ್ಲ. ಹಿಂದಿನ ಮೂರು ಚುನಾವಣೆಗಳಲ್ಲೂ ಸೋತಿದೆ. 2009ರಲ್ಲಿ 35,000, 2014ರಲ್ಲಿ 1.37 ಲಕ್ಷ ಹಾಗೂ 2019ರಲ್ಲಿ 71,000 ಮತಗಳಿಂದ ಪರಾಭವಗೊಂಡಿತ್ತು.

ಹಿಂದಿನ ಚುನಾವಣೆಯಲ್ಲಿ ಗಾಂಧಿನಗರ ಮತ್ತು ರಾಜಾಜಿನಗರದಲ್ಲಿ ಕಾಂಗ್ರೆಸ್ ಮತಗಳು 20-25,000 ಮತ್ತು ಮಹದೇವಪುರ ಮತ್ತು ಸಿವಿ ರಾಮನ್ ನಗರದಲ್ಲಿ 30,000-50,000 ರಷ್ಟು ಕುಸಿದಿದ್ದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಲೀಂ ಅಹ್ಮದ್, ಈ ಕ್ಷೇತ್ರಗಳಲ್ಲಿ ಮನ್ಸೂರ್ ಖಾನ್‌ಗೆ ಹೆಚ್ಚಿನ ಬೆಂಬಲವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಮನ್ಸೂರ್ ಖಾನ್
ಬೆಂಗಳೂರು ಉಪನಗರ ರೈಲು ನಿಗದಿತ ಸಮಯದಲ್ಲಿ ಸಿದ್ಧವಾಗಲಿದೆ: ಪಿಸಿ ಮೋಹನ್ 

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಬೆನ್ನಿಗೆ ಚೂರಿ ಹಾಕಲು ಯತ್ನಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮನ್ಸೂರ್ ಖಾನ್, "ಇದು ನಿಜವಲ್ಲ. ಇವೆಲ್ಲ ಕೇವಲ ವದಂತಿಗಳು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಮತ್ತು ನಾವು ಒಗ್ಗಟ್ಟಾಗಿಯೇ ಇರುತ್ತೇವೆ ಎಂದು ಹೇಳಿದರು. ಇಬ್ಬರ ನಡುವೆ ಚರ್ಚೆ ನಡೆದರೆ ಪಿಸಿ ಮೋಹನ್‌ಗೆ ಏನು ಕೇಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಖಾನ್, ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳ ಬಗ್ಗೆ ಹಾಲಿ ಸಂಸದರನ್ನು ಪ್ರಶ್ನಿಸುವುದಾಗಿ ಹೇಳಿದರು. "ಕರ್ನಾಟಕದ ಜನರ ಮೇಲೆ ಪರಿಣಾಮ ಬೀರಿರುವ ಬರಗಾಲದ ಬಗ್ಗೆ ಸಂಸದರು ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದರೆ ನಾನು ಕೇಳುತ್ತೇನೆ ಎಂದು ಅವರು ಹೇಳಿದರು.

ಈ ಅಂಶಗಳಿಗೆ ಉತ್ತರಿಸಿದ ಪಿಸಿ ಮೋಹನ್, 2009 ರ ಮೊದಲ ಅವಧಿಯಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಜನರ ಬಳಿಗೆ ಹೋಗಿದ್ದೆವು ಮತ್ತು 2014 ಮತ್ತು 2019 ರಲ್ಲಿ ನಾವು ಪ್ರಧಾನಿ ಮೋದಿಯವರ ಅಭಿವೃದ್ಧಿ ಕಾರ್ಯಸೂಚಿಯ ಬಗ್ಗೆ ಮಾತನಾಡಿದ್ದೇವೆ. ನಾವು 18,600 ಕೋಟಿ ವೆಚ್ಚದಲ್ಲಿ ಉಪನಗರ ರೈಲು ತರಲು ಕೆಲಸ ಮಾಡಿದ್ದೇವೆ. ನಮ್ಮ ಮೆಟ್ರೋ ಮತ್ತು ಅದರ ವಿವಿಧ ಹಂತಗಳ ವಿಸ್ತರಣೆಗೆ ಅಗತ್ಯ ಅನುಮತಿಗಳನ್ನು ಪಡೆಯಲು ನಾನು ಅವಿರತವಾಗಿ ಶ್ರಮಿಸಿದ್ದೇನೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಬಡವರಿಗೆ ವಸತಿ ಮತ್ತು ಮಾರಾಟಗಾರರು ಮತ್ತು ವಿದ್ಯಾರ್ಥಿಗಳಿಗೆ ಸಾಲ ಸೇರಿದಂತ ಅನೇಕ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಶ್ರಮಿಸಿದ್ದೇನೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com