ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ; ರಾಜಕೀಯ ನನಗೆ ಹಿಂದೆಯೂ, ಇಂದೂ ಅನಿವಾರ್ಯವಲ್ಲ: ಸಂಸದೆ ಸುಮಲತಾ

ರಾಜಕೀಯಕ್ಕೆ ಬಂದದ್ದು ನಾನು ಆಕಸ್ಮಿಕ, ರಾಜಕೀಯ ನನಗೆ ಅಂದು ಮತ್ತು ಇಂದು ಕೂಡ ಅನಿವಾರ್ಯವಲ್ಲ, ಅಂಬರೀಷ್ ಅವರ ಅಭಿಮಾನ, ಪ್ರೀತಿ, ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದು ಸಂಸದೆಯಾದೆ. ಸ್ವತಂತ್ರ ಸಂಸದೆಯಾಗಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: ರಾಜಕೀಯಕ್ಕೆ ಬಂದದ್ದು ನಾನು ಆಕಸ್ಮಿಕ, ರಾಜಕೀಯ ನನಗೆ ಅಂದು ಮತ್ತು ಇಂದು ಕೂಡ ಅನಿವಾರ್ಯವಲ್ಲ, ಅಂಬರೀಷ್ ಅವರ ಅಭಿಮಾನ, ಪ್ರೀತಿ, ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬಂದು ಸಂಸದೆಯಾದೆ. ಸ್ವತಂತ್ರ ಸಂಸದೆಯಾಗಿ ಮಂಡ್ಯ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ, ಆದರೆ ಅದು ಸರಿಯಾಗಿ ಜನತೆಯನ್ನು ತಲುಪಿಲ್ಲ, ಪ್ರಚಾರ ಸಿಕ್ಕಿಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

ಮಂಡ್ಯದಲ್ಲಿಂದು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, 5 ವರ್ಷಗಳಲ್ಲಿ 2 ವರ್ಷಗಳು ಕೊರೋನಾ ಸೋಂಕಿನಿಂದಾಗಿ ಸಾಕಷ್ಟು ಕೆಲಸಗಳಿಗೆ ಹಿನ್ನಡೆಯಾಯಿತು. 5 ವರ್ಷಗಳಲ್ಲಿ ಮೂರು ವರ್ಷಗಳಲ್ಲಿ ನನ್ನ ಕೈಮೀರಿ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಇಂದು ನರೇಗಾ ಕಾಮಗಾರಿಯಲ್ಲಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿದೆ ಎಂದರು.

ಇದೇ ವೇಳೆ ಕಳೆದ 5 ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಸಾಧನೆ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಮಂಡ್ಯ ಜಿಲ್ಲೆಯ ಮಳವಳ್ಳಿಯ ಹುಚ್ಚೇಗೌಡರ ಸೊಸೆಯಾಗಿ, ಅಂಬರೀಷ್ ಅವರ ಪತ್ನಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆಯಿದೆ. ಅವರು ಎಲ್ಲೇ ಇದ್ದರೂ ನನ್ನ ಬೆನ್ನು ತಟ್ಟಿ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡವು. ಈ ಸಂದರ್ಭದಲ್ಲಿ ನನಗೆ ಬಿಜೆಪಿ ನಾಯಕರು ಬೆಂಗಳೂರು ಉತ್ತರ, ಚಾಮರಾಜನಗರದಲ್ಲಿ ಸ್ಪರ್ಧಿಸುವಂತೆ ಅವಕಾಶ ನೀಡಿದ್ದರು. ಆದರೆ ನಾನು ಸ್ವಾರ್ಥ ರಾಜಕಾರಣ ಮಾಡುವುದಿಲ್ಲ, ಅಧಿಕಾರಕ್ಕೆ ಅಂಟಿಕೊಂಡು ಕೂರುವ ಜಾಯಮಾನ ನನ್ನದಲ್ಲ, ಮಂಡ್ಯ ಬಿಟ್ಟರೆ ನನಗೆ ರಾಜಕೀಯ ಬೇಡ, ಹಠಕ್ಕೆ ಬಿದ್ದು ಸ್ವತಂತ್ರವಾಗಿ ನಿಲ್ಲುವ ಇಚ್ಛೆ ನನಗಿಲ್ಲ ಎಂದರು. ಮಂಡ್ಯ ಬಿಟ್ಟು ಹೋದರೆ ಈ ಮಣ್ಣಿನ ಸೊಸೆ ಎಂದು ಕರೆಸಿಕೊಳ್ಳುವ ಯೋಗ್ಯತೆಯಿಲ್ಲ ಎಂದರು.

ಗೌರವ ಇಲ್ಲದ ಕಡೆ ನಾನು ಹೋಗುವುದಿಲ್ಲ: ಜನಸಾಮಾನ್ಯರು ಹೊರಗಿನಿಂದ ನೋಡುವ ರಾಜಕಾರಣ ಬೇರೆ, ರಾಜಕೀಯ ಪಕ್ಷದೊಳಗೆ ನಾಯಕರ ನಡುವಿನ ರಾಜಕಾರಣ ಬೇರೆ, ಕಾಂಗ್ರೆಸ್ ನ ಹಿರಿಯ ನಾಯಕರು ನನ್ನ ಬಗ್ಗೆ ಆಡಿರುವ ಮಾತುಗಳನ್ನು ನೀವೆಲ್ಲಾ ಕೇಳಿದ್ದೀರಿ,ನೋಡಿದ್ದೀರಿ, ಕಾಂಗ್ರೆಸ್ ಗೆ ಹೋಗುತ್ತೀರಾ ಎಂದು ಕೆಲವರು ಕೇಳಿದರು. ಕಾಂಗ್ರೆಸ್ ನಲ್ಲಿ ಅವರೇ ಬೇಡ ಎಂದಾದ ಮೇಲೆ ನಾನು ಯಾವತ್ತಿಗೂ ಅಲ್ಲಿಗೆ ಹೋಗುವುದಿಲ್ಲ, ಗೌರವ ಇಲ್ಲದ ಕಡೆಗೆ ನಾನು ಯಾಕೆ ಹೋಗಲಿ, ಬಿಜೆಪಿ ಸರ್ಕಾರ ಸ್ವತಂತ್ರ ಸಂಸದೆಯಾದ ನನಗೆ ನನ್ನ ಜಿಲ್ಲೆಯ ಕೆಲಸ ಮಾಡಲು ಸಾಕಷ್ಟು ಅನುದಾನ ನೀಡಿದೆ, ಪ್ರಧಾನಿ ಮೋದಿ ನನಗೆ ಗೌರವ ನೀಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com