ಬರ ಪರಿಹಾರ ಕುರಿತು ಅಮಿತ್ ಶಾ ಹೇಳಿಕೆ "ಸಾಕ್ಷಾತ್ ಸುಳ್ಳು": ಕೇಂದ್ರಕ್ಕೆ ಕಾಂಗ್ರೆಸ್ ತರಾಟೆ
ನವದೆಹಲಿ: ರಾಜ್ಯ ಸರ್ಕಾರ ಮೂರು ತಿಂಗಳು ತಡವಾಗಿ ಪ್ರಸ್ತಾವನೆ ಸಲ್ಲಿಸಿದ್ದರಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ "ಸಾಕ್ಷಾತ್ ಸುಳ್ಳು" ಎಂದು ಕಾಂಗ್ರೆಸ್ ಗುರುವಾರ ಟೀಕಿಸಿದೆ. ಅಲ್ಲದೆ ಪ್ರಧಾನಿ ಮೋದಿ ಅವರು "ಸಂಘರ್ಷದ ಫೆಡರಲಿಸಂ" ನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದೆ.
ಬರ ಪರಿಹಾರ ಸಂಬಂಧ ಕರ್ನಾಟಕ ಪ್ರಸ್ತಾವನೆ ಸಲ್ಲಿಸಿದ ಎಂಟು ತಿಂಗಳ ನಂತರ, ಮೋದಿ ಸರ್ಕಾರ ತನ್ನ ನಿಷ್ಕ್ರಿಯತೆಯನ್ನು ಮರೆಮಾಚಲು ಸುಳ್ಳು ಕಥೆಗಳನ್ನು ಹೆಣೆಯುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದಾರೆ.
"2014ರ ಮೇ ತಿಂಗಳಲ್ಲಿ ಪ್ರಧಾನಿಯವರು ತಮ್ಮ ಇನ್ನಿಂಗ್ಸ್ ಆರಂಭಿಸಿದ್ದು ಸಹಕಾರಿ ಫೆಡರಲಿಸಂ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದ್ದರು. ಬದಲಿಗೆ ಅವರು ನೀಡಿರುವುದು ಘರ್ಷಣೆಯ ಫೆಡರಲಿಸಂ. ಸಹಕಾರಿ ಫೆಡರಲಿಸಂ ಒಮ್ಮತದ ಮೇಲೆ ಆಧಾರಿತವಾಗಿದೆ. ಆದರೆ ಪ್ರಧಾನಿ ಮೋದಿ ಈ ವಿಚಾರದಲ್ಲಿ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿದ್ದಾರೆ" ಎಂದು ರಮೇಶ್ ಆರೋಪಿಸಿದ್ದಾರೆ.
"ಇದಕ್ಕೆ ವ್ಯತಿರಿಕ್ತವಾಗಿ, ಘರ್ಷಣೆ ಮತ್ತು ವಿಭಜನೆ ಮಾಡುವ ಮೂಲಕ "ಸಂಘರ್ಷದ ಫೆಡರಲಿಸಂ" ನಲ್ಲಿ ತೊಡಗಿದ್ದಾರೆ. ಇದು ಪ್ರಧಾನಿ ಮತ್ತು ಅವರ ಗೃಹ ಸಚಿವರ ಪ್ರಮುಖ ಕೌಶಲ್ಯವಾಗಿದೆ - ಗೃಹ ಸಚಿವರ ಇತ್ತೀಚಿನ ಹೇಳಿಕೆಯಿಂದ ಇದು ಸಾಬೀತಾಗಿದೆ" ಎಂದು ಅವರು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಕರ್ನಾಟಕದ 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳು ಬರಗಾಲ ಎದುರಿಸುತ್ತಿವೆ ಮತ್ತು 123 ತಾಲ್ಲೂಕುಗಳು ತೀವ್ರ ಬರ ಪರಿಸ್ಥಿತಿಯನ್ನು ಅನುಭವಿಸುತ್ತಿವೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
"ರಾಜ್ಯ ಸರ್ಕಾರ ಮೂರು ತಿಂಗಳು ತಡವಾಗಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರಿಂದ ಬರ ಪರಿಹಾರ ಬಿಡುಗಡೆ ವಿಳಂಬವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗ ಪ್ರತಿಪಾದಿಸಿದ್ದಾರೆ. ಇದು ಸಂಪೂರ್ಣ ಸುಳ್ಳು: ಕರ್ನಾಟಕ ಸರ್ಕಾರ ಸೆಪ್ಟೆಂಬರ್ 22, 2023 ರಂದು ಬರ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ" ಎಂದು ಅವರು ಹೇಳಿದ್ದಾರೆ.
ಬರ ಪರಿಸ್ಥಿತಿ ಮೌಲ್ಯಮಾಪನ ಮಾಡಲು 10 ಸದಸ್ಯರ ಕೇಂದ್ರ ಅಧ್ಯಯನ ತಂಡ ಅಕ್ಟೋಬರ್ 5 ರಿಂದ 9 ರ ನಡುವೆ ಕರ್ನಾಟಕಕ್ಕೆ ಭೇಟಿ ನೀಡಿ ಅಕ್ಟೋಬರ್ 20 ರಂದು ವರದಿ ಸಲ್ಲಿಸಿದೆ ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ