ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ.
ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಅದರ ಜೊತೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚ ಅಧ್ಯಕ್ಷರ ಆಸ್ತಿ ಐದೇ ವರ್ಷದಲ್ಲಿ 13 ಲಕ್ಷದಿಂದ 4 ಕೋಟಿಗೆ ಏರಿಕೆಯಾಗಿದೆ.
ತೇಜಸ್ವಿ ಸೂರ್ಯ ತಮ್ಮ ಬಳಿ ಯಾವುದೇ ಸ್ವಂತ ಮನೆ, ಕಾರು ಅಥವಾ ಬೈಕ್ ಇಲ್ಲ ಎಂದು ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. 2019 ರಲ್ಲಿ ಆಸ್ತಿ 13.46 ರೂ. ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದ ತೇಜಸ್ವಿ ಸೂರ್ಯ, ಈ ಬಾರಿ 4.10 ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಈ ಮೂಲಕ ಐದೇ ವರ್ಷದಲ್ಲಿ ತೇಜಸ್ವಿ ಸೂರ್ಯ ಆಸ್ತಿಯಲ್ಲಿ ಬರೋಬ್ಬರಿ 30 ಪಟ್ಟು ಹೆಚ್ಚಳವಾಗಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಪ್ರಥಮ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ, ತಮ್ಮ ಪ್ರಮಾಣ ಪತ್ರದಲ್ಲಿ 13.46 ಲಕ್ಷ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದರು.
ತೇಜಸ್ವಿ ಸೂರ್ಯ ಅವರು ಮ್ಯೂಚುವಲ್ ಫಂಡ್, ಈಕ್ವಿಟಿಗಳಲ್ಲಿ 1,99,44,863 ಕೋಟಿ ಹೂಡಿಕೆ ಮಾಡಿದ್ದಾರೆ. 1,79,31,750 ರೂ. ಮಾರುಕಟ್ಟೆ ಮೌಲ್ಯದ ಷೇರುಗಳನ್ನು ಹೊಂದಿದ್ದು, ವಿವಿಧ ವಿಮಾ ಕಂಪನಿಗಳಲ್ಲಿನ 25,28,446 ಲಕ್ಷ ವಿಮೆ ಮಾಡಿಸಿದ್ದಾರೆ. 80 ಸಾವಿರ ನಗದು ಹೊಂದಿದ್ದು, ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ 5,45,430 ರೂ. ಠೇವಣಿ ಇಟ್ಟಿದ್ದಾರೆ. ತೇಜಸ್ವಿ ತಮ್ಮ ಹೆಚ್ಚಿನ ಹಣವನ್ನು ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಹೆಚ್ಚಾಗುತ್ತಿರುವುದೇ ಅವರ ಆಸ್ತಿ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿದೆ.
Advertisement