ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡಿ: ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳವಾರ ಚುನಾವಣಾ ಆಯೋಗದ ಕದ ತಟ್ಟಿದೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಂಗಳವಾರ ಚುನಾವಣಾ ಆಯೋಗದ ಕದ ತಟ್ಟಿದ್ದು, ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದೆ.

ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದ ಕಾಂಗ್ರೆಸ್ ನಿಯೋಗ ಇಂದು ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ, ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಚುನಾವಣಾ ಆಯೋಗಕ್ಕೆ ಬರೆದ ಮನವಿ ಪತ್ರವನ್ನು ಮುಖ್ಯ ಚುನಾವಣಾ ಅಧಿಕಾರಿಗೆ ಸಲ್ಲಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮತ್ತು ಹೆಚ್ಚುವರಿ ಬೆಂಬಲ ನಿಧಿಯಿಂದ 4,663 ಕೋಟಿ ರೂಪಾಯಿ ಹಾಗೂ ಭೀಕರ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಕ್ಕೆ ಹೆಚ್ಚುವರಿಯಾಗಿ 18,171 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಡಿಕೆ ಶಿವಕಮನವಿ ಮಾಡಿದ್ದಾರೆ.

ಪತ್ರದಲ್ಲಿ ರಾಜ್ಯದ 224 ತಾಲೂಕುಗಳು ತೀವ್ರ ಬರಗಾಲ ಎದುರಿಸುತ್ತಿದೆ. 48 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದ್ದು, ಸುಮಾರು 37,000 ಕೋಟಿ ರೂ.‌ನಷ್ಟು ಹಾನಿಯಾಗಿದೆ. ಎನ್​ಡಿಆರ್​ಎಫ್​ ಪ್ರಕಾರ ಕನಿಷ್ಠ 4663 ಕೋಟಿ ರೂ. ಬೆಳೆ ಹಾನಿ ಪರಿಹಾರ ಅಗತ್ಯ ಇದೆ. ಈ ಸಂಬಂಧ ನವೆಂಬರ್​ನಲ್ಲಿ ಕೇಂದ್ರ ಸರ್ಕಾರಕ್ಕೆ ಬರ ನಷ್ಟದ ಮೆಮೊರಂಡಂ ಸಲ್ಲಿಸಲಾಗಿದೆ. ಆದರೆ, ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್
ಬರ ಪರಿಹಾರ ವಿವಾದ: ಸರ್ವೋಚ್ಚ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ ಕೇಂದ್ರ ಸರ್ಕಾರ; ಸಿಎಂ ಸಿದ್ದರಾಮಯ್ಯ ಆರೋಪ

ರಾಜ್ಯ ಸರ್ಕಾರ ಬರ ಪರಿಹಾರ ಬಿಡುಗಡೆಗಾಗಿ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಬರ ಪರಿಹಾರ ಬಿಡುಗಡೆ ಸಂಬಂಧ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತೋರುತ್ತಿದೆ. ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೆ ವಿಳಂಬ ಮಾಡುತ್ತಿದೆ. ಈ ಸಂಬಂಧ ಪ್ರಧಾನಿ ಮೋದಿ, ಅಮಿತ್ ಶಾ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಏ.6ಕ್ಕೆ ತಮ್ಮ ಹೇಳಿಕೆಯಲ್ಲಿ ಮಾರ್ಚ್ 28ಕ್ಕೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಬರ ಪರಿಹಾರ ಮಂಜೂರಾತಿಗಾಗಿನ ಉನ್ನತ ಮಟ್ಟದ ಸಭೆ ಕರೆಯಲು ಅನುಮತಿ ನೀಡುವಂತೆ ಕೋರಲಾಗಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಆಯೋಗ ಅನುಮತಿ ನೀಡದ ಕಾರಣ ವಿಳಂಬವಾಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ರಾಜ್ಯದಲ್ಲಿ ತೀವ್ರವಾದ ಬರವಿದೆ. ಕೇಂದ್ರ ಸಮಿತಿ ಕಳೆದ ಅಕ್ಟೋಬರ್ ನಲ್ಲಿ‌ ಭೇಟಿ ನೀಡಿದ್ದರು. ಇಲ್ಲಿಯವರೆಗೆ ಕೇಂದ್ರ ಹೇಳಿಕೆ ಬಿಟ್ಟರೆ ಪರಿಹಾರ ಕೊಟ್ಟಿಲ್ಲ. ಕಾನೂನುಬದ್ಧವಾಗಿ ಸಿಗಬೇಕಾದ ಪರಿಹಾರ ಕೊಟ್ಟಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com