ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಅಂದಿನ ಸಂದರ್ಭಗಳು ನನ್ನನ್ನು ಅಲ್ಪಕಾಲ ಬಿಜೆಪಿ ತ್ಯಜಿಸುವಂತೆ ಮಾಡಿತ್ತು, ಆ ಬಗ್ಗೆ ವಿಷಾದ ಇಲ್ಲ: ಜಗದೀಶ್ ಶೆಟ್ಟರ್

ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏಳು-ಬೀಳುಗಳನ್ನು ಕಂಡವರು.

ಹಿಂದಿನ ಜನಸಂಘದ ಸದಸ್ಯರಾಗಿ, ದೀರ್ಘಕಾಲದಿಂದ ಭಾರತೀಯ ಜನತಾ ಪಕ್ಷದಲ್ಲಿದ್ದು, ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಪದವಿ, ಸಚಿವ ಸ್ಥಾನ ಸೇರಿದಂತೆ ಪ್ರತಿಪಕ್ಷದ ನಾಯಕ ಮತ್ತು ವಿಧಾನಸಭೆಯ ಸ್ಪೀಕರ್ ಹೀಗೆ ಸರ್ಕಾರ ಮತ್ತು ಪಕ್ಷ ಎರಡರಲ್ಲೂ ಹಲವಾರು ಪ್ರಮುಖ ಸ್ಥಾನಗಳನ್ನು ಅಲಂಕರಿಸಿದ್ದರು.

ಕಳೆದ 2023ರ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ ಕೇಂದ್ರದಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಅಸಮಾಧಾನಗೊಂಡ ಅವರು ಅನಿರೀಕ್ಷಿತವಾಗಿ ಕಾಂಗ್ರೆಸ್‌ಗೆ ಸೇರಿದಾಗ ಅವರ ರಾಜಕೀಯ ಜೀವನದಲ್ಲಿ ಮತ್ತೊಂದು ತಿರುವು ತೆಗೆದುಕೊಂಡಿತು. ಆದರೆ ಕಾಂಗ್ರೆಸ್ ಗೆ ಎಷ್ಟು ಬೇಗನೆ ಸೇರಿಕೊಂಡಿದ್ದರೋ ಅಷ್ಟೇ ತರಾತುರಿಯಿಂದ ಬಿಜೆಪಿಗೆ ಮತ್ತೆ ವಾಪಸ್ಸಾದರು. ಈಗ ಬಿಜೆಪಿ ಪಕ್ಷವು ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡುವ ಮೂಲಕ ಮರಳಿ ಸ್ವಾಗತಿಸಿತು.

ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ, ಶೆಟ್ಟರ್ ಅವರು ಬಿಜೆಪಿಯಿಂದ ಹೊರಬರಲು ಕಾರಣವೇನು ಮತ್ತು ಪಕ್ಷದಲ್ಲಿ ತಮ್ಮ ಸ್ಥಾನವನ್ನು ಹೆಚ್ಚಿಸಲು ಏನು ಮಾಡಿದರು ಎಂಬ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಹೀಗಿದೆ:

Q

ನಿಮ್ಮ ಚುನಾವಣಾ ಪ್ರಚಾರ ಹೇಗೆ ನಡೆಯುತ್ತಿದೆ?

A

ಎಲ್ಲೆಡೆ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಜನರನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿ ಕೈಗೊಂಡಿರುವ ಅಭಿವೃದ್ಧಿಪರ ಕೆಲಸಗಳನ್ನು ಗಮನಿಸಿ, ದೇಶದಾದ್ಯಂತ ಜನರು ಇನ್ನೂ ಒಂದು ದಶಕದ ಕಾಲ ಅವರನ್ನು ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರೋತ್ಸಾಹ ನೀಡುತ್ತಾರೆ ಎಂದು ಭಾವಿಸಿದ್ದೇನೆ. ಬೆಳಗಾವಿ ಕ್ಷೇತ್ರದಲ್ಲಿ ನಮ್ಮ ಅಭಿಯಾನಕ್ಕೆ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Q

ಆರು ಅವಧಿಗೆ ಶಾಸಕರಾಗಿ, ಕಳೆದ ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿರುವ ನೀವು ಲೋಕಸಭೆ ಪ್ರವೇಶಿಸಲು ಏಕೆ ಉತ್ಸುಕರಾಗಿದ್ದೀರಿ?

A

ಒಬ್ಬ ರಾಜಕಾರಣಿಗೆ ಅವನು ಶಾಸಕನಾಗಿರಲಿ ಅಥವಾ ಸಂಸದನಾಗಿರಲಿ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಹೆಚ್ ಎನ್ ಅನಂತ್ ಕುಮಾರ್ ಸೇರಿದಂತೆ ಹಲವು ನಾಯಕರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಬಿಜೆಪಿಯ ಹಲವು ನಾಯಕರು ಸಂಸದರಾಗಿದ್ದರೂ ರಾಜ್ಯದಲ್ಲಿ ಪಕ್ಷದ ಸಂಘಟನೆ ಮತ್ತು ಬೆಳವಣಿಗೆಗೆ ಶ್ರಮಿಸಿದ್ದಾರೆ. ನಾಯಕರ (ಸಂಸದರು ಮತ್ತು ಶಾಸಕರ) ರಾಜಕೀಯ ಚಟುವಟಿಕೆಗಳು ಹೆಚ್ಚಾಗಿ ಪಕ್ಷದ ಉನ್ನತ ನಾಯಕತ್ವವು ತೆಗೆದುಕೊಳ್ಳುವ ನಿರ್ಧಾರಗಳನ್ನು ಅವಲಂಬಿಸಿರುತ್ತದೆ.

Q

ಬಿಜೆಪಿ ನಿಷ್ಠರಾಗಿರುವ ನೀವು ಕಳೆದ ವರ್ಷ ಏಕೆ ಪಕ್ಷವನ್ನು ತೊರೆದಿದ್ದೀರಿ?

A

ಆ ಸಮಯದಲ್ಲಿ (2023 ರ ವಿಧಾನಸಭಾ ಚುನಾವಣೆ ಸಂದರ್ಭ) ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ಘಟನೆಗಳಿಂದ ಅದು ನಡೆದುಹೋಯಿತು. ನಾನು ಪ್ರತಿಭಟನೆ ನಡೆಸಿ ಬಿಜೆಪಿ ತೊರೆಯಬೇಕಾಯಿತು. ಬಿಜೆಪಿ ತೊರೆಯುವ ನನ್ನ ನಿರ್ಧಾರ ಸರಿಯಾಗಿದೆ ಎಂದು ಅನೇಕ ನಾಯಕರು ಭಾವಿಸಿದ್ದಾರೆ ಮತ್ತು ಇಂದು, ನಾನು ಮತ್ತೆ ಬಿಜೆಪಿಗೆ ಮರಳಿದ ನಿರ್ಧಾರವೂ ಸರಿ ಎಂದು ಅನೇಕರು ಭಾವಿಸಿದ್ದಾರೆ. ನಾನು ಬಹಳ ದಿನ ಬಿಜೆಪಿಯಿಂದ ದೂರ ಇರಲಿಲ್ಲ. ಆದಾಗ್ಯೂ, ಕೆಲವು ಸಂದರ್ಭಗಳು ಆ ಸಮಯದಲ್ಲಿ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಬಿಜೆಪಿಗೆ ಮತ್ತೆ ಬಂದಿರುವುದು ನನಗೆ ಖುಷಿ ನೀಡಿದೆ.

Q

ಬಿಜೆಪಿಯಿಂದ ನಿಮ್ಮ ಅಲ್ಪಕಾಲದ ನಿರ್ಗಮನವು ಮುಂಬರುವ ಚುನಾವಣೆಯಲ್ಲಿ ನಿಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೀವು ಭಾವಿಸುವುದಿಲ್ಲವೇ? ಅಂತಹ ಹೆಜ್ಜೆ ಇಟ್ಟಿದ್ದಕ್ಕಾಗಿ ನಿಮಗೆ ವಿಷಾದವಿದೆಯೇ?

A

ನಾನು ಆ ಸಮಯದಲ್ಲಿ ಬಿಜೆಪಿ ತ್ಯಜಿಸುವ ನಿರ್ಧಾರವನ್ನು ಮಾಡಿ ಅದು ನಡೆದುಹೋಯಿತು. ಅದೊಂದು ಕೆಟ್ಟ ಸಮಯ, ಈಗ ನಾನು ಅಂದು ತೆಗೆದುಕೊಂಡ ನಿರ್ಧಾರಗಳನ್ನು ವಿಶ್ಲೇಷಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ನನಗೆ ಸಂಪೂರ್ಣವಾಗಿ ಯಾವುದೇ ವಿಷಾದವಿಲ್ಲ. ನಾನು ಬಿಜೆಪಿಯಿಂದ ಹೊರಗಿರುವಾಗ ನನ್ನ ರಾಷ್ಟ್ರೀಯ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿದ್ದರು. ಅವರ ಕರೆಗೆ ಓಗೊಟ್ಟು ಹೋಗಿ ಭೇಟಿಯಾದೆ. ಮತ್ತೆ ಬಿಜೆಪಿಗೆ ಮರಳಿದೆ. ನಾನು ಸ್ವಲ್ಪ ಕಾಲ ಕಾಂಗ್ರೆಸ್‌ನಲ್ಲಿದ್ದಾಗಲೂ ನಾನು ಯಾರನ್ನೂ, ವಿಶೇಷವಾಗಿ ಮೋದಿ, ಗೃಹ ಸಚಿವ ಅಮಿತ್ ಶಾ ಅಥವಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಟೀಕಿಸಲಿಲ್ಲ. ಪಕ್ಷವನ್ನೂ ಟೀಕಿಸಿರಲಿಲ್ಲ, ರಾಷ್ಟ್ರೀಯ ನಾಯಕತ್ವವನ್ನು ಪ್ರಶ್ನಿಸಿರಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಇದು ನನ್ನ ನಿರೀಕ್ಷೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ.

Q

ಬಿಜೆಪಿ ತೊರೆಯುವಂತೆ ಕಾಂಗ್ರೆಸ್‌ನಿಂದ ಏನಾದರೂ ಒತ್ತಡ ಹೇರಿದ್ದರಾ?

A

ನಾನು ಬಿಜೆಪಿ ತೊರೆಯುವ ಮೊದಲು ನಡೆದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ನಾನು ನಿಜವಾಗಿಯೂ ಅಸಮಾಧಾನಗೊಂಡಿದ್ದೆ ಎಂದು ಗೊತ್ತಾಗುತ್ತದೆ. ಆ ಸಮಯದಲ್ಲಿ ಅವರು (ಕಾಂಗ್ರೆಸ್) ನನ್ನನ್ನು ಕಾಂಗ್ರೆಸ್‌ಗೆ ಸೇರುವಂತೆ ಕೇಳಿಕೊಂಡರು. ನನಗೆ ಬೇರೆ ಯೋಚನೆ ಇರಲಿಲ್ಲ ಹೀಗಾಗಿ ಕಾಂಗ್ರೆಸ್ ಸೇರಿಕೊಂಡೆ.

Q

ನೀವು ಬೆಳಗಾವಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಮುಖ ಅಂಶಗಳು ಯಾವುವು?

A

ಮುಂಬರುವ ಚುನಾವಣೆಯಲ್ಲಿ ಮೋದಿ ಅಂಶವೇ ಪ್ರಮುಖವಾಗಿದ್ದು, ಪಕ್ಷ ಉತ್ತಮ ಸಾಧನೆ ಮಾಡಲು ಸಹಕಾರಿಯಾಗಲಿದೆ. ಜನರು ಮೋದಿ ಮತ್ತು ಅವರ ನಾಯಕತ್ವದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಮೋದಿಯವರ ನಾಯಕತ್ವದಲ್ಲಿ ದೇಶವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಅವರು ಗಮನಿಸುತ್ತಿದ್ದಾರೆ. ಅವರು ತಂದ ಸುಧಾರಣೆಗಳು ಮತ್ತು ಅವರ ನೇತೃತ್ವದಲ್ಲಿ ನಡೆದ ಅನೇಕ ಕ್ಷೇತ್ರಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಯು ಜನರನ್ನು ಮೆಚ್ಚಿಸಿದೆ. ವಂದೇ ಭಾರತ್ ರೈಲುಗಳ ಪರಿಚಯ ಮತ್ತು ವಿಮಾನ ಸೇವೆಗಳನ್ನು ಸುಧಾರಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸುವುದು ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯ ಮಾಡುತ್ತದೆ.

Q

ಬೆಳಗಾವಿ ಕ್ಷೇತ್ರದಲ್ಲಿ ಜಾತಿ ಅಂಶ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಬಲ ಲಿಂಗಾಯತ ಸಮುದಾಯದ ಮತಗಳು ವಿಭಜನೆಯಾಗುವ ಭಯವಿದೆಯೇ?

A

ನೀವು ಹಿಂದಿನ ಬೆಳವಣಿಗೆಗಳನ್ನು ನೆನಪಿಸಿಕೊಂಡರೆ, ಲೋಕಸಭಾ ಚುನಾವಣೆಗಳು ಹೆಚ್ಚಾಗಿ ರಾಷ್ಟ್ರೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿರುತ್ತದೆಯೇ ಹೊರತು ಇತರ ಅಂಶಗಳಲ್ಲ ಎಂಬುದನ್ನು ನೀವು ಗಮನಿಸಿರಬಹುದು. ರಾಷ್ಟ್ರೀಯ ನಾಯಕತ್ವ, ಪ್ರಧಾನಿ ಅಭ್ಯರ್ಥಿ ಇತ್ಯಾದಿಗಳ ಬಗ್ಗೆ ಜನರು ಹೆಚ್ಚು ಕಾಳಜಿ ವಹಿಸುತ್ತಾರೆ. ಜಾತಿ ಮತ್ತು ಇತರ ಅಂಶಗಳು ವಿಧಾನಸಭೆ ಅಥವಾ ಪಂಚಾಯತ್ ಚುನಾವಣೆಗಳಲ್ಲಿ ವಿಷಯವಾಗಬಹುದು, ಲೋಕಸಭೆ ಚುನಾವಣೆಗೆ ಅಲ್ಲ.

Related Stories

No stories found.

Advertisement

X
Kannada Prabha
www.kannadaprabha.com