ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಬಳಿಯಿರುವ ಆಸ್ತಿಯೆಷ್ಟು? ಆರು ವರ್ಷಗಳಲ್ಲಿ ದುಪ್ಪಟ್ಟು!

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೂಡ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.
ಬೆಂಬಲಿಗರೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
ಬೆಂಬಲಿಗರೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕೂಡ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬದ ಪ್ರಭಾವದಿಂದ ಭಾರತೀಯ ಜನತಾ ಪಕ್ಷವನ್ನು ತೊಲಗಿಸುವ ಉದ್ದೇಶದಿಂದ ತಾನು ಬಂಡಾಯ ಅಭ್ಯರ್ಥಿಯಾಗಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರು ನಿನ್ನೆ ನಾಮಪತ್ರ ಸಲ್ಲಿಸಿಯೇ ಬಿಟ್ಟಿದ್ದಾರೆ.

ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಿ ರಾಜ್ಯ ಬಿಜೆಪಿಯನ್ನು ಶುದ್ಧಿಗೊಳಿಸುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಈಶ್ವರಪ್ಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ತಮ್ಮ ನಿಲುವು ಹೇಳಿದ್ದರೂ ಇದೀಗ ಅಧಿಕೃತವಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಎಲ್ಲ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಸದ್ಯಕ್ಕೆ ಅವರ ವಿರುದ್ಧ ರಾಜ್ಯ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಆದಾಗ್ಯೂ, ಉಮೇದುವಾರಿಕೆ ಹಿಂಪಡೆಯಲು ಅಂತಿಮ ದಿನಾಂಕವಾದ ಏಪ್ರಿಲ್ 22 ರೊಳಗೆ ಅವರು ತಮ್ಮ ನಾಮಪತ್ರವನ್ನು ಹಿಂಪಡೆಯಲು ವಿಫಲವಾದರೆ ಬಿಜೆಪಿಯಿಂದ ಶೋಕಾಸ್ ನೊಟೀಸ್ ಕಳುಹಿಸಬಹುದು ಎಂದು ಹೇಳಲಾಗುತ್ತಿದೆ.

ಈಶ್ವರಪ್ಪನವರು ನಿನ್ನೆ ನಾಮಪತ್ರ ಸಲ್ಲಿಸುವ ವೇಳೆ ಉಡುಪಿಯಿಂದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮುಖವಾಡ ಹಾಕಿಕೊಂಡು ಸದಾನಂದ ನಾಯಕ್ ಅವರೊಂದಿಗೆ ಈಶ್ವರಪ್ಪ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಾಮಪತ್ರ ಸಲ್ಲಿಕೆ ವೇಳೆ ಹೆಚ್ಚಿನ ಜನರು ಸೇರಿದ್ದರು.

ಇದಕ್ಕೂ ಮುನ್ನ ಕೋಟೆ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನ ಹಾಗೂ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಈಶ್ವರಪ್ಪನವರು ಕುಟುಂಬಸ್ಥರೊಂದಿಗೆ ಪೂಜೆ ನೆರವೇರಿಸಿದರು. ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಹೊರಟ ಮೆರವಣಿಗೆ ಗಾಂಧಿಬಜಾರ್‌, ಅಮೀರ್‌ ಅಹ್ಮದ್‌ ವೃತ್ತ, ಗೋಪಿ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾಪನಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಈಶ್ವರಪ್ಪ ಅವರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ತಮ್ಮ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಈಶ್ವರಪ್ಪ, ಬಿ ವೈ ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಸೋಲಿಸುವ ಮೂಲಕ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಬಲಿಗರೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ
Lok Sabha election 2024: 'ಮಲೆನಾಡ ಹೆಬ್ಬಾಗಿಲು' ಶಿವಮೊಗ್ಗದಲ್ಲಿ ಈ ಬಾರಿ ರೋಚಕ ತ್ರಿಕೋನ ಸ್ಪರ್ಧೆ!

“ನನ್ನ ಉದ್ದೇಶ ಕೇವಲ ಸಂಸದನಾಗುವುದಲ್ಲ. ಅಪ್ಪ-ಮಕ್ಕಳ ಕಪಿಮುಷ್ಠಿಯಿಂದ ರಾಜ್ಯ ಬಿಜೆಪಿಯನ್ನು ಮುಕ್ತಗೊಳಿಸುವುದಾಗಿದೆ. ಸೋಲಿನ ನಂತರ ರಾಘವೇಂದ್ರ ಮನೆಗೆ ಮರಳಲಿದ್ದಾರೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿದ್ದಾರೆ,'' ಎಂದು ಹೇಳಿದರು. ಈಶ್ವರಪ್ಪ ತಮ್ಮ ಬೆಂಬಲಿಗರನ್ನು ಗೆಲ್ಲಿಸಿ, ಆ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವಂತೆ ಒತ್ತಾಯಿಸಿದರು.

ಈಶ್ವರಪ್ಪನವರ ಆಸ್ತಿಯೆಷ್ಟು?: ನಿನ್ನೆ ಉಮೇದುವಾರಿಕೆ ಸಲ್ಲಿಕೆ ವೇಳೆ ತಮ್ಮ ಆಸ್ತಿ ವಿವರಗಳನ್ನು ಚುನಾವಣಾ ಆಯೋಗಕ್ಕೆ ನೀಡಿರುವ ಈಶ್ವರಪ್ಪ ಅವರ ಬಳಿ 33.50 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

ಕುತೂಹಲದ ವಿಷಯವೆಂದರೆ 2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ಘೋಷಿಸಿದ 16.12 ಕೋಟಿ ರೂಪಾಯಿಗಳಿಂದ ಈಗ 2024ರಲ್ಲಿ ಅವರ ಆಸ್ತಿ ದ್ವಿಗುಣಗೊಂಡಿದೆ. ಆಸ್ತಿಗಳು ಅವರು ಮತ್ತು ಅವರ ಪತ್ನಿ ಜಯಲಕ್ಷ್ಮಿ ಇಬ್ಬರ ಹೆಸರಿನಲ್ಲಿದೆ. ಅವರು 5.87 ಕೋಟಿ ಸಾಲ ಮಾಡಿದ್ದರೆ, ಅವರ ಪತ್ನಿ ಹೆಸರಿನಲ್ಲಿ 70.80 ಲಕ್ಷ ರೂಪಾಯಿ ಸಾಲವಿದೆ.

2022-23ನೇ ಹಣಕಾಸು ವರ್ಷದಲ್ಲಿ ಈಶ್ವರಪ್ಪ ಅವರು ತಮ್ಮ ವಾರ್ಷಿಕ ಆದಾಯ 98.92 ಲಕ್ಷ ಮತ್ತು ಅವರ ಪತ್ನಿ 32.50 ಲಕ್ಷ ರೂಪಾಯಿ ಎಂದು ತಮ್ಮ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಅವರ ವಾರ್ಷಿಕ ಆದಾಯವು 2018-19 ರಲ್ಲಿ 34.88 ಲಕ್ಷದಿಂದ 2022-23 ರಲ್ಲಿ 98.92 ಲಕ್ಷಕ್ಕೆ ಸ್ಥಿರವಾದ ಏರಿಕೆ ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಅವರ ಪತ್ನಿಯ ಸರಾಸರಿ ವಾರ್ಷಿಕ ಆದಾಯ 30 ಲಕ್ಷದಿಂದ 32 ಲಕ್ಷ ರೂಪಾಯಿ ಆಗಿದೆ.

ಈಶ್ವರಪ್ಪನವರು 4.28 ಕೋಟಿ ರೂಪಾಯಿ ಮತ್ತು ಅವರ ಪತ್ನಿ 3.77 ಕೋಟಿ ರೂಪಾಯಿ ಚರ ಆಸ್ತಿ ಹೊಂದಿದ್ದಾರೆ. ಅವರ ಸ್ಥಿರಾಸ್ತಿ ಮೌಲ್ಯ 22.35 ಕೋಟಿ ರೂಪಾಯಿಯಾಗಿದ್ದರೆ, ಅವರ ಪತ್ನಿ ಬಳಿ ಸ್ಥಿರಾಸ್ತಿ ಮೌಲ್ಯ 3.10 ಕೋಟಿ ರೂಪಾಯಿಯಾಗಿದೆ. ಇನ್ನು ಅವರ ಬಳಿ 25 ಲಕ್ಷ ನಗದು ಹಾಗೂ ಪತ್ನಿ ಬಳಿ 2 ಲಕ್ಷ ರೂಪಾಯಿ ನಗದು ಹಣವಿದೆ.

ಈಶ್ವರಪ್ಪ ಅವರು ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಹಲವಾರು ವ್ಯವಹಾರಗಳಲ್ಲಿ ಪಾಲು ಹೊಂದಿದ್ದಾರೆ. ಅವರ ಪತ್ನಿಯೂ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈಶ್ವರಪ್ಪ ಅವರು ಭಾರತ್ ಇಂಡಸ್ಟ್ರೀಸ್‌ಗೆ 65 ಲಕ್ಷ, ಜಯಲಕ್ಷ್ಮಿ ಫ್ಯುಯೆಲ್ಸ್ ನಲ್ಲಿ 16 ಲಕ್ಷ ರೂಪಾಯಿ ಸಾಲ ನೀಡಿದ್ದಾರೆ. ಅಲ್ಲದೆ ಪತ್ನಿಗೆ 15.78 ಲಕ್ಷ ರೂಪಾಯಿ ನೀಡಿದ್ದಾರೆ.

ಈಶ್ವರಪ್ಪ ಅವರ ಬಳಿ 300 ಗ್ರಾಂ ಚಿನ್ನ ಮತ್ತು 2 ಕೆಜಿ ಬೆಳ್ಳಿ ಹೊಂದಿದ್ದು, ಇವುಗಳ ಮೌಲ್ಯ 18.50 ಲಕ್ಷ ರೂಪಾಯಿ ಆಗಿದೆ. ಅವರ ಪತ್ನಿ ಬಳಿ 500 ಗ್ರಾಂ ಚಿನ್ನಾಭರಣ ಹಾಗೂ ಐದು ಕೆಜಿ ಬೆಳ್ಳಿ ಇದ್ದು, ಇದರ ಮೌಲ್ಯ 30 ಲಕ್ಷ ರೂಪಾಯಿ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com