ಬೆಂಗಳೂರು ಸುತ್ತಮುತ್ತವೇ ದೇವೇಗೌಡ ಕುಟುಂಬದ ಆಸ್ತಿ ಸಾವಿರ ಎಕರೆ ಇದೆ: ಕುಮಾರಸ್ವಾಮಿ ವಿರುದ್ಧ ಡಿಕೆಶಿ ಆಕ್ರೋಶ

ಮೈಸೂರಿನಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯವರ ಪಕ್ಕದಲ್ಲಿ ಕುಳಿತು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಸಾಕಷ್ಟು ವಾಗ್ಯುದ್ಧ ನಡೆಸಿದರು.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಪ್ರಮುಖ ಒಕ್ಕಲಿಗ ನಾಯಕರಾದ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಹೆಚ್ ಡಿ ದೇವೇಗೌಡ ಕುಟುಂಬದ ಮಧ್ಯೆ ವಾಗ್ಯುದ್ಧಗಳು ಜೋರಾಗಿದೆ.

ನಿನ್ನೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯವರ ಪಕ್ಕದಲ್ಲಿ ಕುಳಿತು ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಸಾಕಷ್ಟು ವಾಗ್ಯುದ್ಧ ನಡೆಸಿದರು. ನೀರಾವರಿ ಸಚಿವರಾಗಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರು ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದಾರೆ,ಬೆಂಗ್ಳೂರನ್ನೇ ಬಾಚಿಕೊಳ್ತಿದ್ದಾರೆ ಎಂದು ಭ್ರಷ್ಟಾಚಾರ ಆರೋಪ ಮಾಡಿದರು.

ಡಿ ಕೆ ಶಿವಕುಮಾರ್
ಇಡೀ ಬೆಂಗಳೂರು ಡಿಕೆಶಿ ಕಪಿಮುಷ್ಠಿಯಲ್ಲಿದೆ: ಹೆಚ್‌ಡಿ ದೇವೇಗೌಡ

ಇದಕ್ಕೆ ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಪರ ಮೈಸೂರಿನಲ್ಲಿ ನಡೆದ ಒಕ್ಕಲಿಗರ ಮುಖಂಡರ ಸಭೆಯಲ್ಲಿ ತಿರುಗೇಟು ನೀಡಿದ ಡಿ ಕೆ ಶಿವಕುಮಾರ್, ದೇವೇಗೌಡ ಕುಟುಂಬದ ಆಸ್ತಿ ಎಷ್ಟಿದೆ ಲೆಕ್ಕ ಕೊಡಲಿ, ಬೆಂಗಳೂರು ಸುತ್ತಮುತ್ತವೇ ಒಂದು ಸಾವಿರ ಎಕರೆ ಆಸ್ತಿ ಮಾಡಿಕೊಂಡಿದ್ದಾರೆ. ಅವರೇನು ಕಡ್ಲೆಕಾಯಿ, ಆಲೂಗಡ್ಡೆ ಬೆಳೆದು ಆಸ್ತಿ ಸಂಪಾದನೆ ಮಾಡಿದರೇ, ಬೇರೆಯವರ ಹಣ ಲೂಟಿ ಹೊಡೆದು ಮಾಡಿದ್ದಲ್ಲವೇ, ಆ ಬಗ್ಗೆ ಹೆಚ್ಚು ಚರ್ಚೆ ಬೇಡ, ಆದರೆ ತಾವು ಗಾಜಿನ ಮಳೆಯೊಳಗೆ ಕುಳಿತುಕೊಂಡು ಬೇರೆಯವರ ಮನೆಗೆ ಕಲ್ಲು ಹೊಡೆಯಬಾರದು ಅಷ್ಟೇ ಎಂದರು.

ಹಾಸನದಲ್ಲಿ ದೇವೇಗೌಡರ ಮೊಮ್ಮಗನನ್ನು ಗೆಲ್ಲಿಸಲು ಬಿಡುವುದಿಲ್ಲ, ಇನ್ನು ಮಂಡ್ಯದಲ್ಲಿ ಪುಟ್ಟರಾಜುಗೆ ಟಿಕೆಟ್ ನ ಆಸೆ ತೋರಿಸಿ ಕೊನೆಗೆ ಚಾಕಲೇಟ್ ಕೊಟ್ಟುಬಿಟ್ಟು ಕೊನೆಗೆ ಕುಮಾರಸ್ವಾಮಿ ತಾವೇ ನಿಂತುಕೊಂಡಿದ್ದಾರೆ. ಜೆಡಿಎಸ್-ಬಿಜೆಪಿಯಲ್ಲಿ ಕಾರ್ಯಕರ್ತರು ಬೆಳೆಯಲು ಅವಕಾಶ ಕೊಡುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಟೀಕಿಸಿದರು.

ನಾನು ಬೆಳೆದು ಬಿಡುತ್ತೇನೆ ಎಂದು ನನ್ನನ್ನು ಸೋಲಿಸಲು ಸ್ವತಃ ಕುಮಾರಸ್ವಾಮಿಯೇ ನನ್ನ ವಿರುದ್ಧ ಸ್ಪರ್ಧಿಸಿದ್ದರು. ಬೇರೆ ಕಡೆ ಅವಕಾಶವಿದ್ದರೂ ಹೋಗಲಿಲ್ಲ. ಹಿಂದೆ ಸಿದ್ದರಾಮಯ್ಯ ನನ್ನನ್ನು ಮಂತ್ರಿಯೇ ಮಾಡಲಿಲ್ಲ. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಸಿಗಲಿಲ್ಲ. ಆಗ ಹಿಂದಿನದ್ದೆಲ್ಲಾ ಮರೆತು ನಾನೇ ಮುಂದಾಳತ್ವ ವಹಿಸಿಕೊಂಡೆ. ಮುಂದೆ ನಿಮ್ಮನ್ನು ಡಿಸಿಎಂ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು ಎಂದರು.

ದ್ವೇಷವನ್ನೆಲ್ಲ ಮರೆತು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಪರಿಸ್ಥಿತಿ ಸರಿ ಇಲ್ಲದಿದ್ದರೂ ಅಮೆರಿಕಕ್ಕೆ ಹೋದರು, ಫೈವ್ ಸ್ಟಾರ್ ಹೊಟೇಲ್ ನೊಳಗೆ ಬಾಗಿಲು ಹಾಕಿಕೊಂಡು ಕುಳಿತರೆ ರಾಜಕಾರಣ ಮಾಡಕ್ಕೆ ಆಗತ್ತ, ಈಗ ನಾನು ವಿಷ ಹಾಕಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅಧಿಕಾರ ಸಿಕ್ಕಾಗ ಉಳಿಸಿಕೊಳ್ಳಬೇಕಾದ್ದು ಅವರ ಜವಾಬ್ದಾರಿ ಅಲ್ಲವೇ, ಜೆಡಿಎಸ್ ಪಕ್ಷವನ್ನು ನಾವು ನಿರ್ನಾಮ ಮಾಡಿಲ್ಲ, ಇನ್ನು ಬಿಜೆಪಿಯವರೇ ಜೆಡಿಎಸ್ ನ್ನು ಮುಗಿಸುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com