ಕೋವಿಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಸುಧಾಕರ್ ಜೈಲಿಗೆ ಹೋಗುತ್ತಾರೆ: ಸಿಎಂ ಸಿದ್ದರಾಮಯ್ಯ

ಕೋವಿಡ್ ಭ್ರಷ್ಟಾಚಾರದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್​ ನೂರಕ್ಕೆ ನೂರು ಜೈಲಿಗೆ ಹೋಗುತ್ತಾರೆ ಎಂದು ಸಿಎಂ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಕೋವಿಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಜೈಲಿಗೆ ಹೋಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಿದ ಸಿಎಂ ಸಿದ್ದರಾಮಯ್ಯ, ‘ಸುಧಾಕರ್ ಆರೋಗ್ಯ ಸಚಿವರಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಎಸಗಿದ್ದಾರೆ. ಭ್ರಷ್ಟರು ಸಂಸತ್​ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಕೋವಿಡ್ ಭ್ರಷ್ಟಾಚಾರದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್​ ನೂರಕ್ಕೆ ನೂರು ಜೈಲಿಗೆ ಹೋಗುತ್ತಾರೆ ಎಂದರು.

ಕೋವಿಡ್ ನಲ್ಲೂ ಭ್ರಷ್ಟಾಚಾರ ನಡೆಸಿದ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೋದಿ ಪ್ರಚಾರ ನಡೆಸಿದ್ದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಹೀನಾಯವಾಗಿ ಸೋಲು ಅನುಭವಿಸಿದೆ. ಈಗ ಲೋಕಸಭೆ ಚುನಾವಣೆಯಲ್ಲೂ ಅದೇ ಗತಿ ಆಗುತ್ತದೆ ಎಂದರು.

ಸಿಎಂ ಸಿದ್ದರಾಮಯ್ಯ
ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟವಾಗಿದೆ: ಸಿಎಂ ಸಿದ್ದರಾಮಯ್ಯ

ಸುಧಾಕರ್ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಹಣ ಲೂಟಿ ಹೊಡೆದಿದ್ದಾರೆ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದೀರಿ. ಈಗ ರಾಜಕೀಯ ಲಾಭಿ ನಡೆಸಿ ಎನ್ ಡಿಎ ಟಿಕೆಟ್ ಪಡೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ ಸಿಎಂ, ನರೇಂದ್ರ ಮೋದಿ ಹೇಳಿದಂತೆ ನಡೆದುಕೊಂಡಿಲ್ಲ. ಕೊಟ್ಟ ಭರವಸೆಗಳನ್ನು ಈಡೆರಿಸಿಲ್ಲ. ದೇಶದ ಜನರ ಭರವಸೆ ಹುಸಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಮೋದಿ ಅಚ್ಚೇ ದಿನ್ ಆಯೇಗಾ ಎಂದಿದ್ದರು, ಇದುವರೆಗೂ ಒಳ್ಳೆದಿನ ಬರಲಿಲ್ಲ ಎಂದರು.

ಕೊರೋನಾ ಸಂದರ್ಭದಲ್ಲೂ ಭ್ರಷ್ಟಾಚಾರ ನಡೆಸಿದವರಿಗೆ ತಕ್ಕ ಕಾನೂನಿನ ಶಾಸ್ತಿ ಆಗೇ ಆಗುತ್ತದೆ. ಪ್ರಕರಣದ ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರಿಗೆ ಯಾವ ಶಿಕ್ಷೆ ಆಗುತ್ತದೆ ಎಂದು ಕಾದುನೋಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com