ಅಂದು ಬಿಜೆಪಿ ವಿರುದ್ಧ 'PayCM', ಇಂದು 'ಚೊಂಬು' ಅಭಿಯಾನ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ

ಕಾಂಗ್ರೆಸ್ ನಾಯಕರಿಂದ ಚೊಂಬು ಪ್ರತಿಭಟನೆ
ಕಾಂಗ್ರೆಸ್ ನಾಯಕರಿಂದ ಚೊಂಬು ಪ್ರತಿಭಟನೆ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ‘ಪೇಸಿಎಂ’ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ವ್ಯಾಪಕವಾಗಿ ಪರಿಣಾಮಕಾರಿಯಾಗಿ ನಡೆಸಿತ್ತು. ಅದು ವಿಧಾನಸಭೆ ಚುನಾವಣೆ ಫಲಿತಾಂಶದ ಮೇಲೆ ಸ್ವಲ್ಪ ಮಟ್ಟಿನ ಪರಿಣಾಮವನ್ನು ಕೂಡ ಬೀರಿತ್ತು. ಇಂದು 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿರುದ್ಧ ರಾಜ್ಯ ಕಾಂಗ್ರೆಸ್ ‘ಚೊಂಬು’ ಅಭಿಯಾನ ಆರಂಭಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭ ಶಾಸಕ ರಿಜ್ವಾನ್ ಅರ್ಷದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನೇತೃತ್ವದಲ್ಲಿ ಮೇಕ್ರಿ ಸರ್ಕಲ್ ನಲ್ಲಿ ಚೊಂಬು ಹಿಡಿದುಕೊಂಡು ಮತ್ತು ಚೊಂಬಿನ ಚಿತ್ರವನ್ನು ಹೊಂದಿರುವ ಭಿತ್ತಿಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ನಾಯಕರಿಂದ ಚೊಂಬು ಪ್ರತಿಭಟನೆ
ಕಾವೇರಿ ಮಾತೆಯ ‘ತುಂಬಿದ ಕೊಡ’ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು: ಕಾಂಗ್ರೆಸ್ 'ಚೊಂಬು' ಜಾಹೀರಾತಿಗೆ ಬಿಜೆಪಿ ತಿರುಗೇಟು

ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಬೆಂಗಳೂರು ಉತ್ತರ ಲೋಕಸಭೆ ಅಭ್ಯರ್ಥಿ ಪ್ರೊ.ಎಂ.ವಿ.ರಾಜೇಗೌಡ ಇದೇ ರೀತಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

‘ಕರ್ನಾಟಕದ ಜನತೆ, ರೈತರು ಬರ ಪರಿಹಾರ ಕೇಳಿದಾಗ ಬಿಜೆಪಿ ಸರ್ಕಾರ ಖಾಲಿ ‘ಚೊಂಬು’ ನೀಡಿದೆ.15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಬರಬೇಕಾದ ಪಾಲು ಕೇಳಿದಾಗ ಕೇಂದ್ರ ‘ಚೊಂಬು’ ನೀಡಿದೆ’ ಎಂದು ರಂದೀಪ್ ಸಿಂಗ್ ಸುರ್ಜೆವಾಲಾ ಆರೋಪಿಸಿದರು.

ಇದಲ್ಲದೆ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ 5,300 ಕೋಟಿ ರೂಪಾಯಿಗಳ ಬಜೆಟ್ ಭರವಸೆ ಬಿಡುಗಡೆ ಮಾಡಿಲ್ಲ, ಕೇಂದ್ರಕ್ಕೆ ತೆರಿಗೆಯಾಗಿ ಕರ್ನಾಟಕ 100 ರೂಪಾಯಿ ಕೊಡುಗೆ ನೀಡುತ್ತಿದ್ದರೆ ರಾಜ್ಯಕ್ಕೆ ಬರುತ್ತಿರುವ ಅನುದಾನ ಸಹಾಯ ಮೊತ್ತ ಕೇವಲ 13 ರೂಪಾಯಿ ಆಗಿದೆ. ಅಲ್ಲದೆ, ಬೆಂಗಳೂರಿನ ಪೆರಿಫೆರಲ್ ರಿಂಗ್ ರೋಡ್‌ಗೆ ಅಗತ್ಯ ಹಣ ಬಂದಿಲ್ಲ ಎಂದು ಆಪಾದಿಸಿದರು.

ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕರ್ನಾಟಕ ಹಾಗೂ ದೇಶದ ಜನತೆ ಬಿಜೆಪಿಗೆ ಖಾಲಿ ‘ಚೊಂಬು’ ನೀಡಲಿದ್ದಾರೆ ಎಂದು ಲೇವಡಿ ಮಾಡಿದರು.

2023ರ ವಿಧಾನಸಭೆ ಚುನಾವಣೆಗೂ ಮುನ್ನ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್‌ ನ್ನು ಬಿಜೆಪಿ ಸರ್ಕಾರ ಪಡೆದಿತ್ತು ಎಂಬ ಆರೋಪವನ್ನು ಬಳಸಿಕೊಂಡು ‘ಪೇಸಿಎಂ’ ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್‌, ಈ ಬಾರಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ. ಬರ ಪರಿಹಾರದ ವಿರುದ್ಧ ತೆರಿಗೆ ಹಂಚಿಕೆ ಮತ್ತು ಎನ್‌ಡಿಆರ್‌ಎಫ್ ನಿಧಿಯ ವಿಷಯಗಳ ಕುರಿತು ಕೇಂದ್ರದ ಮೋದಿ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com