ಅವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ; ಪೆನ್ ಡ್ರೈವ್ ಇಟ್ಟುಕೊಂಡು ಹೆದರಿಸುವ ಚಿಲ್ಲರೆ ಕೆಲಸ ಮಾಡಲ್ಲ: ಡಿಕೆಶಿ
ಬೆಂಗಳೂರು: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋಗಳ ಹಿಂದೆ ತಮ್ಮ ಕೈವಾಡ ಇದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಪವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳ ಸಂಬಂಧ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ, ಮಹಿಳೆಯರ ಬಗ್ಗೆ ಅಪಾರ ಗೌರವ ಇದೆ ಇಂಥ ಚಿಲ್ಲರೆ ಕೆಲಸಗಳನ್ನು ಯಾವತ್ತೂ ಮಾಡಲ್ಲ. ಪೆನ್ ಡ್ರೈವ್ ಇದೆ ಎಂದು ಹೆದರಿಸಲ್ಲ. ನಾವು ಚುನಾವಣೆಯನ್ನ ಎದುರಿಸುತ್ತೇವೆ. ನೇರವಾಗಿ ಅಸಂಬ್ಲಿಯಲ್ಲಿ ಚರ್ಚೆ ಮಾಡುತ್ತೇವೆ. ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.
ಇಂಥವರನ್ನ ಭಗವಂತನೂ ಕ್ಷಮಿಸಲ್ಲ. ಕುಮಾರಸ್ವಾಮಿ ಅವರಿಗೆ ನನ್ನನ್ನು ನೆನಪಿಸಿಕೊಂಡಿಲ್ಲ ಅಂದ್ರೆ ನಿದ್ರೆ ಬರಲ್ಲ. ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿದೆ. ಕಾನೂನು ಪ್ರಕಾರ ಏನು ಆಗಬೇಕೋ, ಅದು ಆಗುತ್ತದೆ. ಹಾಗೆಯೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವಾಗ ಅವರ ಜತೆಗೆ ಇದ್ದವರು ಯಾರು? ಯಾರು ಯಾರಿಗೆ ಕರೆ ಮಾಡಿದ್ರು ಅನ್ನೋದನ್ನ ಅವರನ್ನೇ ಕೇಳಬೇಕು. ಇದು ಹಳೇ ವಿಡಿಯೋ ಎಂದು ಎಚ್ ಡಿ ರೇವಣ್ಣ ಹೇಳಿದ್ದಾರೆ. ಅಂದರೆ ಪ್ರಜ್ವಲ್ ವಿಡಿಯೋ ಬಗ್ಗೆ ರೇವಣ್ಣ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಗುಸುಗುಸು ಚರ್ಚೆಯಾಗಿದ್ದು, ಈಗ ಬಹಿರಂಗವಾಗಿದೆ. ಬಿಜೆಪಿಯವರು ಈ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎನ್ನುವುದು ಎಲ್ಲರ ಪ್ರಶ್ನೆ ಎಂದರು.
ಕುಮಾರಸ್ವಾಮಿ ನನ್ನ ಮನೆಯ ಮುಂದೆ ಪ್ರತಿಭಟನೆ ಮಾಡಿಸುವುದಾದರೆ ಧಾರಾಳವಾಗಿ ಮಾಡಿಸಲಿ ಎಂದ ಡಿಕೆ ಶಿವಕುಮಾರ್, ಕುಮಾರಸ್ವಾಮಿಯವರ ಹೇಳಿಕೆ ಮತ್ತು ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ಅವರು ಪ್ರಜ್ವಲ್ ವಿಡಿಯೋಗಳ ಬಗ್ಗೆ ಪಕ್ಷದ ವರಿಷ್ಟರಿಗೆ ಪತ್ರ ಬರೆದು ಹೇಳಿರುವದನ್ನು ಓದಿ ಹೇಳಿದರು.
ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿದರೆ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ, ಚುನಾವಣೆಯಲ್ಲಿ ಕಾಂಗ್ರೆಸ್ ಈ ಅಂಶವನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತದೆ ಎಂದು ಬರೆದಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಈ ಹಿಂದೆ ಕುಮಾರಸ್ವಾಮಿ ಅವರು ಚುನಾವಣಾ ಪ್ರಚಾರದಲ್ಲಿ ಪ್ರಜ್ವಲ್ ನನ್ನ ಮಗ ಅಂತ ಹೇಳಿದವರು ಈಗ ಆ ಕುಟುಂಬವೇ ಬೇರೆ ಅನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ