
ಬೆಂಗಳೂರು: ಮುಡಾದಲ್ಲಿನ ನಿವೇಶನ ಹಂಚಿಕೆ ಹಗರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ನ್ನು ಹಿಂಪಡೆಯುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕ ಸರ್ಕಾರ ಗುರುವಾರ ತೀವ್ರವಾಗಿ ಒತ್ತಾಯಿಸಿದೆ. ಇದು ಕಾಂಗ್ರೆಸ್ ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ನಗರದಲ್ಲಿಂದು ನಡೆದ ಸಂಪುಟ ಸಭೆಯಲ್ಲಿ ಶೋಕಾಸ್ ನೋಟಿಸ್ ಕುರಿತು ಸಚಿವರು ಚರ್ಚಿಸಿದರು. ರಾಜ್ಯಪಾಲರ ಸಂವಿಧಾನಿಕ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಕಾನೂನುಬದ್ಧವಾಗಿ ಚುನಾಯಿತವಾದ ಬಹುಮತದ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಘಟಿತ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ವಕೀಲ, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ರಾಜ್ಯಪಾಲರು ಜುಲೈ 26 ರಂದು ನೋಟಿಸ್ ಜಾರಿ ಮಾಡಿದ್ದು, ಪ್ರಾಸಿಕ್ಯೂಷನ್‌ಗೆ ಏಕೆ ಅನುಮತಿ ನೀಡಬಾರದು ಎಂಬುದಕ್ಕೆ ಏಳು ದಿನಗಳೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ಸಚಿವ ಸಂಪುಟದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಅಬ್ರಹಾಂ ವಿರುದ್ಧ ಬ್ಲ್ಯಾಕ್ ಮೇಲ್ ಮತ್ತು ಸುಲಿಗೆಯ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂಬ ಅಂಶವನ್ನು ಗಮನಿಸುವಲ್ಲಿ ರಾಜ್ಯಪಾಲರು ವಿಫಲರಾಗಿದ್ದಾರೆ. ಮುಖ್ಯಮಂತ್ರಿಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ಹಾಗೂ ಅಬ್ರಹಾಂ ಸಲ್ಲಿಸಿರುವ ಅರ್ಜಿಯನ್ನು ತಕ್ಷಣವೇ ತಿರಸ್ಕರಿಸುವಂತೆ ಸಚಿವ ಸಂಪುಟ ರಾಜ್ಯಪಾಲರನ್ನು ತೀವ್ರವಾಗಿ ಒತ್ತಾಯಿಸಿರುವುದಾಗಿ ತಿಳಿಸಿದರು.
ರಾಜ್ಯಪಾಲರು ನೋಟಿಸ್ ಹಿಂಪಡೆಯುವ, ಯಾವುದೇ ಒತ್ತಡಕ್ಕೆ ಬಗ್ಗದೆ ತಮ್ಮ ಕಚೇರಿಯ ಘನತೆಯನ್ನು ಎತ್ತಿಹಿಡಿಯುವ ವಿಶ್ವಾಸವಿದೆ ಎಂದು ಹೇಳಿದ ಶಿವಕುಮಾರ್, ಶೋಕಾಸ್ ನೋಟಿಸ್ ನೀಡುವಲ್ಲಿ ರಾಜ್ಯಪಾಲರು ಎಲ್ಲಾ ಕಾರ್ಯವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಅನಗತ್ಯ ಆತುರದಿಂದ ವರ್ತಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯಪಾಲರ ನಿರ್ಧಾರ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ಎಂದು ಬಣ್ಣಿಸಿದ ಡಿಕೆ ಶಿವಕುಮಾರ್, ಇಲ್ಲಿ ಪ್ರಾಸಿಕ್ಯೂಷನ್‌ಗೆ ಯಾವುದೇ ಪ್ರಕರಣವಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಉತ್ತಮ ಮಾರುಕಟ್ಟೆ ಮೌಲ್ಯವಿರುವ ಪ್ರದೇಶದಲ್ಲಿ ಪರಿಹಾರವಾಗಿ ನಿವೇಶನ ನೀಡಲಾಗಿದೆ ಎಂಬ ಆರೋಪವಿದೆ. ಇದು ಮುಡಾ ಸ್ವಾಧೀನಪಡಿಸಿಕೊಂಡಿರುವ ಪಾರ್ವತಿ ಅವರ ಭೂಮಿಗೆ ಹೋಲಿಸಿದರೆ ಹೆಚ್ಚಿನ ಮೌಲ್ಯವನ್ನು ಹೊಂದಿದೆ.
ಮುಡಾ ಹಗರಣ 4,000 ಕೋಟಿಯಿಂದ 5,000 ಕೋಟಿ ರೂ.ವರೆಗೆ ನಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಜುಲೈ 14 ರಂದು ಮುಡಾ 'ಹಗರಣ'ದ ತನಿಖೆಗಾಗಿ ಮಾಜಿ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದೆ. ಇಂದಿನ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿ ಗೈರು ಹಾಜರಾಗಿದ್ದರು. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
Advertisement