
ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಸಿಡಿ ಮತ್ತು ವಿಡಿಯೋ ತಯಾರಿಕೆಯಲ್ಲಿ ನಿಪುಣರು ಎಂದು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರೂ ಆಗಿರುವ ಶಿವಕುಮಾರ್ ಅವರು ಸಿಡಿ ಮಾಡುವ ಹವ್ಯಾಸವನ್ನು ಬಿಟ್ಟಿಲ್ಲ. ಮಂಗಳವಾರ ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಅವರು ನನ್ನ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಇತರರ ಹಳೆಯ ವಿಡಿಯೋಗಳನ್ನು ಪ್ಲೇ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿವಕುಮಾರ್ ಅವರಿಗೆ ಅಷ್ಟೊಂದು ಉತ್ಸುಕತೆ ಇದ್ದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸಿದ್ದರಾಮಯ್ಯನವರು ಈ ಹಿಂದೆ ಮಾಡಿರುವ ಟೀಕೆಗಳನ್ನೂ ಅವರು ಪ್ರದರ್ಶಿಸಬೇಕು. ನಾನು ಹಿಂದೆ ನೀಡಿದ್ದ ಹೇಳಿಕೆಗಳನ್ನು ಡಿವಿಡಿ ಶಿವು ಪ್ಲೇ ಮಾಡಿ ತೋರಿಸಿದ್ದಾರೆ. ನಿಮ್ಮ ಸಿದ್ದರಾಮಯ್ಯ ಈ ಹಿಂದೆ ಕಾಂಗ್ರೆಸ್ ಬಗ್ಗೆ ಏನೆಲ್ಲ ಮಾತಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಏನೆಲ್ಲಾ ಮಾತನ್ನಾಡಿದ್ದಾರೆ ಎನ್ನುವುದನ್ನೂ ತೋರಿಸಬೇಕಿತ್ತು. ಅದನ್ನೆಲ್ಲ ಮರೆತಿದ್ದೀರಿ ಯಾಕೆ” ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಡಿಸಿಎಂ ಒಂದು ವಿಷಯ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸಚಿವರಾದರೆ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸುತ್ತೇನೆ ಎಂದು ಹೇಳಿದ್ದರು ಎಂದು ನನ್ನ ಬಗ್ಗೆ ಹೇಳಿದ್ದರು. ನಾನು ಹೇಳಿದ್ದು, ನಿಮ್ಮ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ನಾಯಕರನ್ನು ಒಪ್ಪಿಸಿ. ಅದಾದ ಮೇಲೆ ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರದ ಅನುಮತಿ ಕೊಡಿಸಲಾಗುವುದು ಎಂದು ತಿಳಿಸಿದ್ದೆ. ಆದರೆ, ಕಾಂಗ್ರೆಸ್ ಇಬ್ಬಗೆಯ ನೀತಿ ಅನುಸರಿಸುತ್ತಾ ಕನ್ನಡಿಗರಿಗೆ ಮಂಕುಬೂದಿ ಎರಚುತ್ತಿದೆ” ಎಂದು ಆರೋಪಿಸಿದರು.
ಮೇಕೆದಾಟು ಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಕಾಂಗ್ರೆಸ್ ವರಸೆ ಹೇಗಿದೆ ಎಂದರೆ ಕರ್ನಾಟಕದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತದೆ. ಅದೇ ದೆಹಲಿಗೆ ಬಂದಾಕ್ಷಣ ಡಿಎಂಕೆ ಜತೆ ಸೇರಿಕೊಂಡು ಈ ಯೋಜನೆಯ ವಿರುದ್ಧ ಗಲಾಟೆ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯಸಭೆಯಲ್ಲಿ ದೇವೇಗೌಡರು ಕಾವೇರಿ ಬಗ್ಗೆ ಚರ್ಚೆ ಮಾಡುತ್ತಿದ್ದರೆ ನಿಮ್ಮ ಮಿತ್ರಪಕ್ಷ ಡಿಎಂಕೆ ಸದಸ್ಯರು ಗದ್ದಲ ಎಬ್ಬಿಸುತ್ತಾರೆ. ಆ ಸಮಯದಲ್ಲಿ ರಾಜ್ಯದವರೇ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕಾಂಗ್ರೆಸ್ ಸದಸ್ಯರು ಮೌನ ವಹಿಸುತ್ತಾರೆ. ಅವರು ಯಾಕೆ ದೇವೇಗೌಡರಿಗೆ ದನಿಗೂಡಿಸಲ್ಲ? ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಕೇಳುವ ನೀವು ಡಿಎಂಕೆ ಜತೆ ಕುಮ್ಮಕ್ಕಾಗಿ ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಿರಿ” ಎಂದು ಪ್ರಶ್ನಿಸಿದರು.
Advertisement