ಶೋಷಿತರು ಅಧಿಕಾರ ನಡೆಸೋದನ್ನ ಮನುವಾದಿಗಳು ಸಹಿಸಲ್ಲ; ಬಿಜೆಪಿ, ಜೆಡಿಎಸ್ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ: ಸಿಎಂ

ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ, ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ. ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಮೈಸೂರು: ಮನುವಾದಿಗಳು, ಜಾತಿವಾದಿಗಳು ಯಾವತ್ತೂ ಕೂಡ ಶೋಷಿತರು ಅಧಿಕಾರ ನಡೆಸುವುದನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ, ನೀವೆಲ್ಲಾ ಪ್ರಜಾಪ್ರಭುತ್ವದ ಸೇನಾನಿಗಳು. ಸಂವಿಧಾನ, ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ರಕ್ಷಣೆಗೆ ನಿಂತ ನಾಡಿನ ಏಳುಕೋಟಿ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ದೇವರಾಜ ಅರಸು, ಬಂಗಾರಪ್ಪ ಅವರನ್ನೂ ಇವರು ಸಹಿಸಲಿಲ್ಲ. ಈಗ ನನ್ನನ್ನೂ ಸಹಿಸುತ್ತಿಲ್ಲ ಎಂದರು. ಜೆಡಿಎಸ್ ನ ದೇವೇಗೌಡರು ಮತ್ತು ಕುಮಾರಸ್ವಾಮಿ ಯಾವತ್ತೂ ಕೊಟ್ಟ ಮಾತಿನಂತೆ ನಡೆದುಕೊಳ್ಳುವವರಲ್ಲ. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಅಧಿಕಾರ ನಡೆಸಿದರೆ ನನ್ನ ಶವದ ಮೇಲೆ ನಡೆಸಬೇಕು ಎಂದು ದೇವೇಗೌಡರು ಹೇಳಿದ್ದರು. ಮೋದಿ ಮತ್ತೆ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ ದೇವೇಗೌಡರೇ ಈಗ ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿದ್ದೀನಿ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ಇಷ್ಟೆಲ್ಲಾ ಅಧಿಕಾರ ಸಿಕ್ಕಾಗಲೂ ನನಗೆ ಹಣ ಮಾಡುವ ಆಸೆ ಬಂದಿಲ್ಲ, ನನ್ನ ಪತ್ನಿ ಇವತ್ತಿನವರೆಗೂ ಸಾರ್ವಜನಿಕವಾಗಿ ಕಾಣಿಸಿಲ್ಲ. ಎರಡು ಬಾರಿ ಸಿಎಂ ಆದರೂ ಪ್ರಮಾಣ ವಚನಕ್ಕೂ ಬರಲಿಲ್ಲ. ನಾವು ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ನಿಮ್ಮ ನಂಬಿಕೆಗೆ ದ್ರೋಹ ಎಸಗಲು ಸಾಧ್ಯವಿಲ್ಲ. ನಾನು ರಾಜಕೀಯದಲ್ಲಿ ಇರುವವರೆಗೂ ಯಾವತ್ತೂ ನಿಮ್ಮ ನಂಬಿಕೆಗೆ ದ್ರೋಹ ಬಗೆಯಲ್ಲ ಎಂದರು.

ನಾನು ಸೊನ್ನೆಯಿಂದ ರಾಜಕೀಯ ಪ್ರಾರಂಭಿಸಿದೆ. 1983 ರಲ್ಲಿ ಮೊದಲ ಚುನಾವಣೆಗೆ ಡೆಪಾಸಿಟ್ ಮಾಡಲು ನನ್ನ ಬಳಿ ಹಣ ಇರಲಿಲ್ಲ. ನನ್ನ ಕಚೇರಿ ಕ್ಲರ್ಕ್ ಆನಂದ 250ರೂ ಡೆಪಾಸಿಟ್ ಕಟ್ಟಿದರು. ಜನರೇ ಹಣ ಕೊಟ್ಟು ಚುನಾವಣೆ ಗೆಲ್ಲಿಸಿದರು. ಆ ಚುನಾವಣೆಯಲ್ಲಿ ಜನರೇ 63 ಸಾವಿರ ರೂಪಾಯಿ ಖರ್ಚು ಮಾಡಿ ನನ್ನನ್ನು ಆರಿಸಿದರು ಎಂದು ತಮ್ಮ ಸಚ್ಚಾರಿತ್ರ್ಯದ ಚರಿತ್ರೆಯನ್ನು ಬಿಚ್ಚಿಟ್ಟರು. ನನ್ನ ಒಂಬತ್ತು ಚುನಾವಣೆ ಗೆಲುವಲ್ಲೂ ಜನರೇ ಹಣ ಖರ್ಚು ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ‌. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಹಾಗೂ ಸಮಸ್ತ ಜನರ ಏಳಿಗೆಗಾಗಿ ಮಾತ್ರ ನನ್ನ ಅಧಿಕಾರ ಮುಡಿಪಾಗಿಟ್ಟಿದ್ದೇನೆ ಎಂದರು.

ಸಿಎಂ ಸಿದ್ದರಾಮಯ್ಯ
MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ CBI ತನಿಖೆ ಸಾಧ್ಯತೆ, ಕುತೂಹಲ ಮೂಡಿಸಿದ ರಾಜ್ಯಪಾಲರ ನಡೆ

ಬಿಜೆಪಿ, ಜೆಡಿಎಸ್ ಒಟ್ಟಾಗಿ ಎಷ್ಟೇ ಪಾದಯಾತ್ರೆ ನಡೆಸಿದರೂ ನಾನು ಜಗ್ಗಲ್ಲ, ಬಗ್ಗಲ್ಲ. ಹಿಂದುಳಿದ ವರ್ಘಳಲ್ಲಿ ದೇವರಾಜ ಅರಸು ಬಿಟ್ಟರೆ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸಿದ್ದು ನಾನು ಮಾತ್ರ. ಇದನ್ನು ಬಿಜೆಪಿ, ಜೆಡಿಎಸ್ ಸಹಿಸುತ್ತಿಲ್ಲ. ಆದರೆ ಎಲ್ಲಿಯವರೆಗೂ ಸೇನಾನಿಗಳಾದ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ನನ್ನನ್ನು ಯಾವ ಪಾದಯಾತ್ರೆಗಳೂ ಅಲುಗಾಡಿಸಲು ಸಾಧ್ಯವಿಲ್ಲ ವಾಲ್ಮೀಕಿ ನಿಗಮದ ಪ್ರಕರಣದಲ್ಲೂ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಲು ಯತ್ನಿಸಿ ಸೋತರು. ದಾಖಲೆಗಳು ಸ್ಪಷ್ಟವಾಗಿವೆ. ಸರ್ಕಾರಕ್ಕೂ ನಿಗಮದ ಹಗರಣಕ್ಕೂ ಸಂಬಂಧ ಇಲ್ಲ ಎನ್ನುವುದು ದಾಖಲೆಗಳಲ್ಲಿದೆ ಎಂದು ತಿಳಿಸಿದರು.

ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂದ ತಕ್ಷಣ ನಾವು SIT ರಚಿಸಿದೆವು. ತನಿಖೆ ನಡೆದು ಹಣ ವಾಪಾಸ್ ವಸೂಲಾಗಿದೆ. 50 ಕೋಟಿ ರೂಪಾಯಿಯನ್ನು SIT ರಿಕವರಿ ಮಾಡಿ ಆಗಿದೆ. 46 ಕೋಟಿ ಹಣ ಖಾಸಗಿ ಬ್ಯಾಂಕ್ ನಲ್ಲಿದ್ದು ಫ್ರೀಜ್ ಮಾಡಿದ್ದಾರೆ. ಇಷ್ಟು ಪರಿಣಾಮಕಾರಿಯಾಗಿ SIT ಯವರು ತನಿಖೆ ನಡೆಸಿದ್ದಾರೆ. ಆದರೂ ED ಯವರು ಸ್ವಯಂಸ್ಫೂರ್ತಿಯಿಂದ ಕೇಸು ದಾಖಲಿಸಿಕೊಂಡು ತನಿಖೆ ನಡೆಸಿದರೂ ಸರ್ಕಾರದ ವಿರುದ್ಧ ಏನೂ ದಾಖಲೆ ಸಿಗಲಿಲ್ಲ. ಹೀಗಾಗಿ ಹಗರಣವೇ ಅಲ್ಲದ ಮೂಡಾ ಪ್ರಕರಣಕ್ಕೆ ಹಗರಣದ ಬಣ್ಣ ಕೊಟ್ಟರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ
ನ್ಯಾಯಾಂಗ ತನಿಖೆ ಆರಂಭವಾಗಿದೆ ಎಂದರೆ ಸೈಟ್ ವಾಪಸ್ ಕೊಟ್ಟಂತೆ: ಯತೀಂದ್ರ ಸಿದ್ದರಾಮಯ್ಯ

ನನ್ನದೊಂದು ಪತ್ರ ಇಲ್ಲ, ನನ್ನದೊಂದು ಸಹಿ ಇಲ್ಲ, ಆಗ ನಮ್ಮ ಸರ್ಕಾರ ಅಧಿಕಾರದಲ್ಲೂ ಇರಲಿಲ್ಲ. ಆದರೂ ಹಗರಣ, ಹಗರಣ ಎಂದು ಬೊಬ್ಬೆ ಹಾಕುತ್ತಾ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಇದಕ್ಕೆ ನೀವ್ಯಾರೂ ಸೊಪ್ಪು ಹಾಕಬೇಡಿ, ನಂಬಬೇಡಿ ಎಂದು ಕರೆ ನೀಡಿದ ಮುಖ್ಯಮಂತ್ರಿ, ಯಡಿಯೂರಪ್ಪ ಅವರು ಈ ವಯಸ್ಸಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಪೋಕ್ಸೋ ಕೇಸಲ್ಲಿ ಇದ್ದಾರೆ. ನಾಚಿಕೆ ಆಗಲ್ವಾ? ಬಿಜೆಪಿ, ಜೆಡಿಎಸ್ ಅಧಿಕಾರಿದಲ್ಲಿ ಇದ್ದಾಗ ನಡೆಸಿದ್ದು ಒಂದಾ, ಎರಡಾ ಹಗರಣಗಳು. ಸುಪ್ರೀಕೋರ್ಟ್ ನಲ್ಲಿ ತಮ್ಮ ಹಗರಣಗಳಿಗೆ ತಡೆಯಾಜ್ಞೆ ತಂದಿದ್ದಾರೆ. ಇವರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ವಾ?ಯಡಿಯೂರಪ್ಪ ಅವರು ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದರು. ಆರ್.ಅಶೋಕ್, ವಿಜಯೇಂದ್ರ ಇವರೆಲ್ಲರೂ ಜೈಲಿಗೆ ಹೋಗಬೇಕಾದವರು. ಇವರಿಗೆ ನನ್ನ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೇಯಾ ಎಂದು ಪ್ರಶ್ನಿಸಿದರು.

15 ಬಜೆಟ್ ಮಂಡಿಸಿದವನು ನಾನು. ನನಗೆ ಹಣದ ಮೋಹ ಇದ್ದಿದ್ದರೆ ಕೋಟಿ ಕೋಟಿ ಮಾಡಬಹುದಿತ್ತು. ಇಷ್ಟು ದಿನವಾದರೂ ನನಗೆ ಮೈಸೂರಲ್ಲಿ ಮನೆ ಇಲ್ಲ. ಈಗ ಕಟ್ಟಿಸುತ್ತಿದ್ದೇನೆ. ಹಿಂದಿದ್ದ ಮನೆ ಸಾಲ ತಗೊಂಡು ಕಟ್ಟಿಸಿದ್ದೆ. ಸಾಲ ತೀರಿಸಲಾಗದೆ ಆ ಮನೆ ಮಾರಿಬಿಟ್ಟೆ. ಬಾಡಿಗೆ ಮನೆಯಲ್ಲಿ ಇದ್ದುಕೊಂಡೇ ವಿಧಾನಸಭೆ, ಲೋಕಸಭೆ ಚುನಾವಣೆ ಮಾಡಿದೆ. ಈಗ ಕಟ್ಟುತ್ತಿರುವ ಮಬೆ ಬಿಟ್ಟು ನನ್ನ ಹೆಸರಲ್ಲಿ ಒಂದೇ ಒಂದು ಸೈಟು ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಈಗ ರಾಜಭವನವನ್ನು ದುರುಪಯೋಗಪಡಿಸಿಕೊಂಡು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಷಡ್ಯಂತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ ಸೇರಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ತರಲು ಶ್ರಮಿಸುತ್ತೇನೆ: ಎಚ್ ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ವಿರುದ್ಧ, ನಿರಾಣಿ ವಿರುದ್ಧ, ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದರೂ ರಾಜಭವನದಿಂದ ಇದುವರೆಗೂ ನೋಟಿಸ್ ಹೋಗಿಲ್ಲ. ಆದರೆ ನನಗೆ ಮಾತ್ರ ನೋಟಿಸ್ ಬಂದಿದೆ. ಇದು ಪರಮ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದರಲ್ಲಿ ನನ್ನ ತಪ್ಪು ಎಲ್ಲಿದೆ? ಮುಡಾದ ಯಾವ ಸದಸ್ಯರಿಗೂ ನಾನು ಕರೆ ಮಾಡಿಲ್ಲ, ಬೇಡಿಕೆ ಇಟ್ಟಿಲ್ಲ, ಶಿಫಾರಸ್ಸು ಮಾಡಿಲ್ಲ. ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಹೀಗಿದ್ದಾಗ ಇದರಲ್ಲಿ ನನ್ನ ಪಾತ್ರ ಏನು ಹೇಳಿ? ನಾನು ತಪ್ಪು ಮಾಡಿದ್ದೀನಾ ಹೇಳಿ ಎಂದು ನೆರೆದಿದ್ದ ಜನರನ್ನು ಕೇಳಿದರು.

ನಮ್ಮ ಜಮೀನು ಪಡೆದು ಸೈಟು, ಪಾರ್ಕು ಮಾಡಿ, ರಸ್ತೆ ಮಾಡಿ ಹಂಚಿಬಿಟ್ಟರು. ಇಲ್ಲಿ ತಪ್ಪು ಮಾಡಿರುವುದು ಮೂಡ ಎನ್ನುತ್ತಾ ಮುಡಾ ಸೈಟು ಹಂಚಿಕೆಯಲ್ಲಿ ಮೂಡ ಮಾಡಿರುವ ಲೋಪಗಳನ್ನು ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com