ಕನಕಪುರ: ಕುಮಾರಸ್ವಾಮಿ ಅವರ ಹೇಳಿಕೆ ನೋಡುತ್ತಿದ್ದರೆ ಅವರಿಗೆ ಆದಷ್ಟು ಬೇಗ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು ಎನಿಸುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಕನಕಪುರದಲ್ಲಿ ಜನರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ ಅವರ ಸಾವಿಗೆ ಕಾರಣ ಯಾರು ಎಂದು ನಿಮ್ಮ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. “ನಾನು ಅವರ ತಂದೆ ವಿರುದ್ಧ 1985ರಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೆ. ಬಂಗಾರಪ್ಪನವರ ಸಂಪುಟದಲ್ಲಿ ಸಚಿವನಾಗಿದ್ದೆ. ನನ್ನ ಹಾಗೂ ಎಸ್.ಎಂ ಕೃಷ್ಣ ಅವರ ನಡುವಣ ಸಂಬಂಧ ಏನು ಎಂದು ಕುಮಾರಸ್ವಾಮಿಗೆ ಏನು ಗೊತ್ತಿದೆ? ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಅವರ ಪಕ್ಷದವರಿಗೆ, ನಾಯಕರಿಗೆ, ಹಿತೈಷಿಗಳಿಗೆ ಹೇಳೋಣ” ಎಂದು ತಿಳಿಸಿದರು.
ನಾವು ಬಡವರು, ಹೊಲ ಉಳುಮೆ ಮಾಡಿಕೊಂಡಿದ್ದೆವು. ನಾನು ಬೆಂಗಳೂರಿನ ಎನ್ ಪಿಎಸ್ ಶಾಲೆಯಲ್ಲಿ ಓದಿದವನು. ನನ್ನ ಇತಿಹಾಸ ಅಲ್ಲಿಂದ ಶುರುವಾಗಿದೆ ಮೊದಲಿಂದಲೂ ದೊಡ್ಡ ಸಂಚು ನಡೆದುಕೊಂಡು ಬಂದಿದ್ದು, ಈಗಲೂ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ 10 ತಿಂಗಳಲ್ಲಿ ಸರ್ಕಾರ ತೆಗೆಯುವುದಾಗಿ ಹೇಳಿದ್ದಾರೆ” ಎಂದು ತಿಳಿಸಿದರು. ಶಿವಕುಮಾರ್ ನನ್ನ ಮೇಲೆ ಕಲ್ಲು ಬಂಡೆ ಎತ್ತಿಹಾಕಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಯಾವ ರೀತಿ ಅವರ ಮೇಲೆ ಬಂಡೆ ಹಾಕಿದ್ದೇನೆ ಎಂದು ಅವರು, ಅವರ ಪಕ್ಷದ ನಾಯಕರು ಹೇಳಲಿ. ಅವರ ಮಾತುಗಳನ್ನು ಕೇಳುತ್ತಿದ್ದರೆ, ಅವರಿಗೆ ಚಿಕಿತ್ಸೆ ಕೊಡಿಸುವುದು ಉತ್ತಮ” ಎಂದರು. ಹೇಡಿ ಯಾರು ಎಂಬುದನ್ನು ಸದನದಲ್ಲಿ ಬಂದು ಮಾತನಾಡಲಿ ಎಂದು ತಿಳಿಸಿದರು. ಕುಮಾರಸ್ವಾಮಿ ಮೇಲೆ ಕಣ್ಣಾಕಿದರೆ ಸರ್ವನಾಶವಾಗ್ತಾರೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಮೇಲೆ ಕಣ್ಣಾಕಿದರೂ ಅದೇ ಸಮಸ್ಯೆ ಆಗುತ್ತದೆಯಲ್ಲವೇ ಎಂದು ತಿಳಿಸಿದರು.
ಕುಮಾರಸ್ವಾಮಿ ಯಾವ ಆಧಾರದ ಮೇಲೆ 10 ತಿಂಗಳಲ್ಲಿ ಸರ್ಕಾರ ಬೀಳಿಸುತ್ತೇವೆ ಎಂದಿದ್ದಾರೆ? ಕುಮಾರಸ್ವಾಮಿ ಅವರ ಸರ್ಕಾರವನ್ನೇ ಬಿಜೆಪಿಯವರು ಬೀಳಿಸಿದ್ದರಲ್ಲಾ ಅದರ ಬಗ್ಗೆ ಕುಮಾರಸ್ವಾಮಿ ಯಡಿಯೂರಪ್ಪ, ಅಶೋಕ್, ಅಶ್ವತ್ಥ್ ನಾರಾಯಣ, ಅಶೋಕ್ ಅವರ ಬಗ್ಗೆ ಮಾತನಾಡುತ್ತಿಲ್ಲ? ನಮ್ಮ ಸರ್ಕಾರವನ್ನು ಹೇಗೆ 10 ತಿಂಗಳಲ್ಲಿ ತೆಗೆಯುತ್ತಾರೆ. ನಮ್ಮ ಸರ್ಕಾರವನ್ನು ಮುಟ್ಟಲಿ ನೋಡೋಣ. ಹಿಂದುಳಿದ ನಾಯಕನೊಬ್ಬ ರಾಜ್ಯದಲ್ಲಿ ಜನರ ಆಶೀರ್ವಾದದೊಂದಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದೇ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಾರಾ? ಕೇಂದ್ರದಲ್ಲಿ ಅವರದೂ ಸಮ್ಮಿಶ್ರ ಸರ್ಕಾರವೇ. ನಾನು ಆ ಸರ್ಕಾರ ಬೀಳಿಸುತ್ತೇವೆ ಎಂದು ಹೇಳಿದ್ದೇವಾ? ಇವರು ಗೆದ್ದಿರುವುದು ಕೇವಲ ಎರಡು ಕ್ಷೇತ್ರ. ಆದರೂ ಬಿಜೆಪಿಯವರು ಇವರನ್ನು ಹೇಗೆ ಸಹಿಸಿಕೊಂಡಿದ್ದಾರೆ ಗೊತ್ತಾ? ಬಿಜೆಪಿಯ ಆಂತರಿಕದಲ್ಲಿ ಏನೆಲ್ಲಾ ನಡೆಯುತ್ತಿದೆ ಗೊತ್ತಿದೆಯಾ? ಅಲ್ಲಿ ಅನುಭವಿಸುತ್ತಿರುವವರಿಗೆ ಗೊತ್ತು” ಎಂದು ತಿಳಿಸಿದರು.
ಬಿಜೆಪಿಯಲ್ಲಿ ವಿಜಯೇಂದ್ರ ಅನುಭವಿಸುತ್ತಿದ್ದಾರಾ ಅಥವಾ ಯಾರು ಅನುಭವಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು “ಅದನ್ನು ನಾನ್ಯಾಕೆ ಹೇಳಲಿ. ಬ್ಲಾಕ್ ಮೇಲೆ ಮಾಡಿದವರ ಕೈಕಾಲು ಹಿಡಿದು ಕರೆದುಕೊಂಡು ಬಂದು ಪಾದಯಾತ್ರೆ ಮಾಡಿದರು. ಒಕ್ಕಲಿಗರ ಪ್ರದೇಶದಲ್ಲಿ ದಳದ ಕಾರ್ಯಕರ್ತರು ಎಲ್ಲಿದ್ದರು? ಮಂಡ್ಯ, ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಎಲ್ಲಿದ್ದರು? ಹೊರಗಡೆಯಿಂದ ಬಂದ ಬಿಜೆಪಿಯ ಕಾರ್ಯಕರ್ತರು ಹೆಚ್ಚಾಗಿದ್ದರು. 90% ರಷ್ಟು ಬಿಜೆಪಿ ಕಾರ್ಯಕರ್ತರಿದ್ದರೆ, 10% ಜೆಡಿಎಸ್ ಕಾರ್ಯಕರ್ತರಿದ್ದರು” ಎಂದು ತಿಳಿಸಿದರು.
ಬಿಜೆಪಿ ಅವರು ವರ್ಷದ 365 ದಿನವೂ ಪಾದಯಾತ್ರೆ ಮಾಡಲಿ, ಸಿಎಂ ರಾಜೀನಾಮೆ ಕೊಡುವ ಪ್ರಶ್ನೆ, ಪರಿಸ್ಥಿತಿ ಇಲ್ಲ. ಇದು ರಾಜಕೀಯ ಷಡ್ಯಂತ್ರ. ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ ಅಶೋಕ್, ವಿಜಯೇಂದ್ರ ಅವರಿಗೆ ಭ್ರಮೆ, ಹಗಲುಗನಸು ಕಾಣುತ್ತಿದ್ದಾರೆ. ಇದು ಸಾಧ್ಯವಿಲ್ಲ” ಎಂದು ತಿಳಿಸಿದರು.
Advertisement