ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ತನಿಖೆಗೆ ಹೆದರುವ ರಕ್ತವಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ‘ಸಿದ್ದರಾಮಯ್ಯ ತಪ್ಪಿತಸ್ಥರಲ್ಲದಿದ್ದರೆ ತನಿಖೆಗೆ ಹೆದರುವುದು ಏಕೆ’ ಎಂದು ಬಿಜೆಪಿ ಸಂಸದ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿಗಳು ಹೆದರುವ ಪ್ರಶ್ನೆಯೇ ಇಲ್ಲ. ನಲವತ್ತು ವರ್ಷ ರಾಜಕಾರಣ ಮಾಡಿಕೊಂಡು ಬಂದಿರುವ ಅವರು ಹೆದರುವವರಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ ಎಂದರು.
ಸಿದ್ದರಾಮಯ್ಯ ಅವರು ತನಿಖೆಗೆ ಹೆದರುತ್ತಿದ್ದರೆ ಐಎಎಸ್ ಅಧಿಕಾರಿಯಿಂದ ತನಿಖೆಗೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತಿರಲಿಲ್ಲ. ಮುಡಾ ಅಕ್ರಮಗಳ ಬಗ್ಗೆ ಸಿದ್ದರಾಮಯ್ಯ ವಿರುದ್ಧ ಯಾವುದೇ ಪುರಾವೆ ಇಲ್ಲದಿರುವ ಕಾರಣಕ್ಕೆ ಹೈಕೋರ್ಟ್ ಪ್ರಾಸಿಕ್ಯೂಷನ್ ಗೆ ತಡೆ ನೀಡಿದೆ. ಈ ಹಿಂದೆ ರಚನೆ ಮಾಡಿರುವ ಆಯೋಗದಂತೆ ನ್ಯಾಯಾಂಗ ತನಿಖೆ ನಡೆಯಲಿದೆ” ಎಂದರು.
ಇದೇ ವೇಳೆ ಸಿದ್ದರಾಮಯ್ಯ ಐದು ವರ್ಷ ಅವಧಿ ಪೂರ್ಣಗೊಳಿಸುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, “ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಮತ್ತು ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ಅಧಿಕಾರದಲ್ಲಿ ಇರುತ್ತದೆ” ಎಂದರು.
ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಅವಮಾನ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, “ಅವರನ್ನು ರಾಜ್ಯಪಾಲರ ಹುದ್ದೆಗೆ ಕೂರಿಸಿರುವುದು ಸಂವಿಧಾನವೇ ಹೊರತು ಜಾತಿಯಲ್ಲ” ಎಂದರು.
ರಾಜ್ಯಪಾಲರನ್ನು ನಿಂದಿಸಿದವರ ಮೇಲೆ ಪೊಲೀಸರು ಸ್ವಯಂಪ್ರೇರಿತರಾಗಿ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎನ್ನುವ ವಿರೋಧ ಪಕ್ಷಗಳ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, ಕಲಬುರ್ಗಿಯಲ್ಲಿ ನಿರ್ಮಾಣವಾಗಿರುವ ಹೊಸ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಬಂದು ಸೇರಿಸಲು ಹೇಳಿ ಎಂದು ಹೇಳಿದರು.
Advertisement