
ಬೆಂಗಳೂರು: ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ರಾಷ್ಟ್ರಪತಿಗಳ ಪ್ರತಿನಿಧಿಯಂತೆ ಕಾರ್ಯನಿರ್ವಹಿಸಬೇಕೇ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ವಿಷಯದಲ್ಲಿ ಕೆಲವರನ್ನು ಮಾತ್ರ ಆಯ್ಕೆ ಮಾಡಬಾರದು. ಗವರ್ನರ್ ಒಂದು ಸಾಂವಿಧಾನಿಕ ಹುದ್ದೆ ಮತ್ತು ನಾವು ಅದನ್ನು ಗೌರವಿಸುತ್ತೇವೆ. ನಾವು ಹೇಳುವುದೇನೆಂದರೆ ಅವರು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ ಹೊರತು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಲ್ಲ ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ತಡೆ ಕಾಯ್ದೆಯ 17ಎ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 ರ ಸೆಕ್ಷನ್ 218 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಆಗಸ್ಟ್ 16 ರಂದು ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2023 ರ ನವೆಂಬರ್ 23 ರಂದು ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ಲೋಕಾಯುಕ್ತರು ರಾಜ್ಯಪಾಲರ ಅನುಮತಿ ಕೋರಿದೆ. ಆದರೆ ಇಲ್ಲಿಯವರೆಗೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
2007ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಖಾಸಗಿ ಸಂಸ್ಥೆಗೆ ಕಾನೂನು ಉಲ್ಲಂಘಿಸಿ ಗಣಿ ಗುತ್ತಿಗೆ ನೀಡಿರುವ ಆರೋಪದಡಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅನುಮತಿ ನೀಡುವಂತೆ ಲೋಕಾಯುಕ್ತ ಸೋಮವಾರ ಮತ್ತೊಮ್ಮೆ ರಾಜ್ಯಪಾಲರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಬಿಜೆಪಿಯ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ಮತ್ತು ಜನಾರ್ದನ ರೆಡ್ಡಿ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರು ಲೋಕಾಯುಕ್ತಕ್ಕೆ ಅನುಮತಿ ನೀಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಮತ್ತೊಂದೆಡೆ, ಟಿ ಜೆ ಅಬ್ರಹಾಂ ಅವರು ಜುಲೈ 26 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರಿಗೆ ನನ್ನ ವಿರುದ್ಧ(ಖಾಸಗಿ) ದೂರು ಸಲ್ಲಿಸಿದರು ಮತ್ತು 10 ಗಂಟೆಗಳ ನಂತರ ನನಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಇದು ತಾರತಮ್ಯವಲ್ಲವೇ? ಆ ಕಾರಣದಿಂದಲೇ ಪಿಕ್ ಆ್ಯಂಡ್ ಸೆಲೆಕ್ಟ್ ಮಾಡಬೇಡಿ ಎಂದು ರಾಜ್ಯಪಾಲರಿಗೆ ತಿಳಿಸಲಾಗಿದೆ ಎಂದರು.
Advertisement