SIT ವರದಿಯಲ್ಲಿ SM ಕೃಷ್ಣ, ಧರಂ ಸಿಂಗ್ ಹೆಸರೂ ಇದೆ: ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಹುಟ್ಟಿ ಬರಬೇಕು - HDK ಆಕ್ರೋಶ

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿದೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿIANS
Updated on

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿಯವರನ್ನು ಬಂಧಿಸುವ ಅಗತ್ಯಬಿದ್ದರೆ ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಹುಟ್ಟಿ ಬರಬೇಕು ಎಂದು ಹೇಳಿದ್ದಾರೆ.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ಗುತ್ತಿಗೆ ಮುಂಜೂರು ಮಾಡಿದ್ದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಕರ್ನಾಟಕ ಲೋಕಾಯುಕ್ತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಹೆದರುವುದಿಲ್ಲ. ತಮ್ಮ ವಿರುದ್ಧದ ತನಿಖೆ ಪೂರ್ಣಗೊಂಡಿದ್ದರೆ, ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್‌ಗೆ ಅನುಮೋದನೆಗೆ ಕೋರಿದ್ದಾರೆ. 2023ರ ನವೆಂಬರ್‌ನಲ್ಲಿ ಅನುಮತಿ ಕೇಳಿದ್ದು, ಸುಮಾರು ಹತ್ತು ತಿಂಗಳಾಗಿದೆ. ಆದರೆ ನೆನ್ನೆ ಬೆಳಗ್ಗೆಯಿಂದ ಸಂಜೆವರೆಗೂ ಕುಮಾರಸ್ವಾಮಿಗೆ ಮತ್ತೆ ಗಣಿ ಸಂಕಷ್ಟ ಶುರುವಾಗಿದೆ ಅಂತ ವರದಿಗಳು ಬರುತ್ತಿವೆ. 2023ರ ಜುಲೈನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಬಂದಾಗಲೇ ವರ್ಗಾವಣೆ ದಂಧೆಗೆ ಮುಂದಾದರು. ಅದರ ಬಗ್ಗೆ ನಾನು‌ ವಾಗ್ದಾಳಿ ನಡೆಸಿದೆ ಇದು ಸರ್ಕಾರಕ್ಕೆ‌ ಮುಜುಗರ ತಂದಿತು. ಆಗ ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಅಂತೆಲ್ಲಾ ಹೇಳಿದರು ಎಂದು ಟೀಕಿಸಿದರು.

ಈ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಯು.ವಿ.ಸಿಂಗ್ ಅವರು ಸಿದ್ಧಪಡಿಸಿರುವ ಲೋಕಾಯುಕ್ತ ವರದಿಯಲ್ಲಿ ಮೂವರು ಮುಖ್ಯಮಂತ್ರಿಗಳ ಹೆಸರಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ, ದಿವಂಗತ ಮಾಜಿ ಸಿಎಂ ಎನ್. ಧರಂ ಸಿಂಗ್ ಮತ್ತು ನನ್ನ ಹೆಸರನ್ನು ಉಲ್ಲೇಖಿಸಲಾಗಿತ್ತು. ಆ ವರದಿಯಲ್ಲಿ ಅಂದಿನ ಸಿಎಂ ಪ್ರಕರಣದಲ್ಲಿ ಮಿಸ್ ಕಂಡಕ್ಟ್ ರಿಪೋರ್ಟ್‌ ಇತ್ತು. ಅವರ ಮೇಲೆ ಯಾವ ರೀತಿಯ ಆಕ್ಷನ್ ಆಗಬೇಕು ಅಂತ ಒತ್ತಾಯ ಮಾಡಲ್ಲ ಅಂತ ಲೋಕಾಯುಕ್ತ ವರದಿ ನೀಡಿದ್ದರು ಎಂದರು. '2008ರಲ್ಲಿ ನಾನು ಸಿಎಂ ಆಗಿದ್ದಾಗ ಪ್ರಕರಣದಲ್ಲಿ ಕಾಂಗ್ರೆಸ್ ನನ್ನನ್ನು ಸಿಲುಕಿಸಲು ಯತ್ನಿಸಿತ್ತು. ಗಣಿ ಕಂಪನಿಗಳ ಮಾಲೀಕರಿಂದ 150 ಕೋಟಿ ರೂ. ವಸೂಲಿ ಮಾಡಿದ್ದೇನೆ ಎಂದು ಶಾಸಕರೊಬ್ಬರು ಆರೋಪ ಮಾಡಿದ್ದರು. ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು. ಪ್ರಕರಣದಲ್ಲಿ ವಿರೋಧ ಪಕ್ಷದ ನಾಯಕರು ಸೇರಿದಂತೆ ನ್ಯಾಯಾಂಗ ತನಿಖೆ ಕೋರಿ ಯಾರೂ ಅರ್ಜಿ ಸಲ್ಲಿಸಿರಲಿಲ್ಲ, ಆದರೆ ನಂತರ ನಾನು ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದೆ ಎಂದು ಕೇಂದ್ರ ಸಚಿವರು ಹೇಳಿದರು.

ಎಚ್ ಡಿ ಕುಮಾರಸ್ವಾಮಿ
ಸನ್ನಿವೇಶ ಬಂದ್ರೆ ಮುಲಾಜಿಲ್ಲದೆ ಕುಮಾರಸ್ವಾಮಿ ಬಂಧನ: ಸಿಎಂ ಸಿದ್ದರಾಮಯ್ಯ

ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ 61ಕ್ಕೂ ಹೆಚ್ಚು ಪ್ರಕರಣಗಳಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇನೆ. 50 ಪ್ರಕರಣಗಳಲ್ಲಿ ತನಿಖೆ ಆರಂಭವಾಗಬೇಕಿದೆ. ಸಿಎಂ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ಕಪ್ಪು ಚುಕ್ಕೆ‌ ಇಲ್ಲದ ನಾಯಕ, ಹಿಂದುಳಿದ ನಾಯಕ ಅಂತ ಹೇಳಿಕೊಳ್ಳುತ್ತಾರೆ. ಆದರೆ ಲೋಕಾಯುಕ್ತವನ್ನು ಇವರು ಏನು ಮಾಡಿದರು ಎಂದು ಪ್ರಶ್ನಿಸಿದರು. ಇನ್ನು ಎಸ್‌ಐಟಿ ಅಧಿಕಾರಿಗಳು 2017ರಲ್ಲಿ ನನಗೆ ನೋಟಿಸ್ ನೀಡಿದ್ದರು. ನಾನು ಬಯಸಿದರೆ 2018ರಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬಹುದಿತ್ತು. ನಾನು ನ್ಯಾಯಾಲಯದಿಂದ ಜಾಮೀನು ಪಡೆದು ತನಿಖೆಯನ್ನು ಎದುರಿಸಿದ್ದೇನೆ. ಮೂರರಲ್ಲಿ ತನಿಖೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಎಸ್‌ಐಟಿ ಅಧಿಕಾರಿಗಳು 2018ರಲ್ಲಿ ತಮ್ಮ ವರದಿಯನ್ನು ಸಲ್ಲಿಸಿದ್ದರು. ಇದೆಲ್ಲದರ ನಡುವೆಯೂ ನಾವು ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದೇವು ಎಂದು ಕುಮಾರಸ್ವಾಮಿ ಹೇಳಿದರು.

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ನನ್ನ ಸಹಿಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ. ಕಂಪನಿಯು ನ್ಯಾಯಾಲಯದ ದಾರಿ ತಪ್ಪಿಸಿದೆ ಎಂದು ಅವರು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com