ಚನ್ನಪಟ್ಟಣ: ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿರುವ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳ ಕಸರತ್ತು ಆರಂಭವಾಗಿದೆ.
ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಟಿಕೆಟ್‌ಗಾಗಿ ಪಕ್ಷದ ಇಬ್ಬರು 'ಸಾಮಾನ್ಯ' ಕಾರ್ಯಕರ್ತರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಇದು ಬಿಜೆಪಿಯ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ಆಸೆಗೆ ತಣ್ಣೀರೆರೆಚಿದಂತಾಗಿದೆ, ಹೀಗಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ. ಮೂಲಗಳ ಪ್ರಕಾರ, ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು ಅಥವಾ ಹಾಪ್‌ಕಾಮ್ಸ್ ದೇವರಾಜ್ ಅವರನ್ನು ಕಣಕ್ಕಿಳಿಸಲು ದಳಪತಿಗಳ ತಂತ್ರ ರೂಪಿಸತ್ತಿದ್ದಾರೆ. ಈ ಮೂಲಕ ಮೈತ್ರಿ ಪಾಲುದಾರ ಬಿಜೆಪಿಗೆ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇದು ಜೆಡಿಎಸ್ ಗೆದ್ದಿರುವ ಸ್ಥಾನ ಮತ್ತು ನಾವು ಅದನ್ನು ಬಿಜೆಪಿಗೆ ಏಕೆ ನೀಡಬೇಕು? ಎಂದು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್ .ಡಿ ಮಾರಸ್ವಾಮಿ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಅವರ ಪುತ್ರ, ಜೆಡಿಎಸ್ ಯುವ ಮುಖಂಡ ನಿಖಿಲ್ ಅವರು ಅಭ್ಯರ್ಥಿಯಾಗುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದಾರೆ. ಹಾಗೇನಾದರೂ ಆಗಿದ್ದರೆ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಬಹುದಿತ್ತು ಎಂದು ಆಂಗ್ಲ ದೈನಿಕ ಪತ್ರಿಕೆಗೆ ತಿಳಿಸಿದ್ದಾರೆ. ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವುದು ನನ್ನ ಗುರಿ. ಚುನಾವಣೆಗೆ ಸ್ಪರ್ಧಿಸುವುದು ನನ್ನ ಅಜೆಂಡಾವಾಗಿದ್ದರೆ, ಮಂಡ್ಯದಿಂದ ಸ್ಪರ್ಧಿಸಲು ನನಗೆ ಎಲ್ಲಾ ಅವಕಾಶವಿತ್ತು ಎಂದು ನಿಖಿಲ್ ಹೇಳಿದ್ದಾರೆ.
ಜೆಡಿಎಸ್ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವುದಿಲ್ಲ ಎಂಬ ಸುಳಿವು ನೀಡಿದ ನಿಖಿಲ್, ಇದು ನನ್ನ ತಂದೆ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಅದನ್ನು ಜೆಡಿಎಸ್ ಉಳಿಸಿಕೊಳ್ಳಬೇಕು ಎಂಬುು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಇದೇ ವೇಳೆ, ಪಕ್ಷದ ಸಾಮಾನ್ಯ ಕಾರ್ಯಕರ್ತನನ್ನು ಕಣಕ್ಕಿಳಿಸುವ ಕುರಿತ ಮಾತನಾಡಿದ ನಿಖಿಲ್, ಈ ಹಿಂದೆ ಚನ್ನಪಟ್ಟಣ ಕ್ಷೇತ್ರದಿಂದ ಸಿಂ.ಲಿಂ.ನಾಗರಾಜು ಅವರು ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡರು. ನಾಗರಾಜು 50 ಸಾವಿರ ಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಆದರೆ, ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿರುವ ಯೋಗೇಶ್ವರ್, ಪಕ್ಷಕ್ಕೆ ಸೀಟು ಏಕೆ ಮುಖ್ಯ ಎಂಬುದನ್ನು ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದೇನೆ ಎಂದು ಹೇಳಿದರು.'ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವ ಏಕೈಕ ಕ್ಷೇತ್ರ ಇದಾಗಿದ್ದು, ಅದನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬಿಜೆಪಿಯ ರಾಜ್ಯ ನಾಯಕರು ಮುಂದಿನ ವಾರ ದೆಹಲಿಗೆ ಭೇಟಿ ನೀಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದರು. “ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಎರಡೂ ಪಕ್ಷಗಳಿಗೆ ಅಗತ್ಯವಾಗಿದೆ. ಜನರು ನನ್ನೊಂದಿಗಿದ್ದು, ನಾನು ಸ್ಪರ್ಧಿಸುವ ಪಕ್ಷ ಈ ಬಾರಿ ಗೆಲ್ಲುವುದು ಖಚಿತ ಎಂದರು.ಟಿಕೆಟ್ ನಿರಾಕರಿಸಿದರೆ ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ, ಸ್ವತಂತ್ರವಾಗಿ ಸ್ಪರ್ಧಿಸಿದರೂ ಗೆಲ್ಲುತ್ತೇನೆ ಎಂದು ಯೋಗೇಶ್ವರ್ ಹೇಳಿದರು.
Advertisement