ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಸೈಟು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಿರುದ್ಧ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಷ್ಟ್ರಪತಿಗಳನ್ನು ಭೇಟಿ ಮಾಡಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಯಿತು. ರಾಜ್ಯಪಾಲರ ನಡೆ ಬಗ್ಗೆ ಶಾಸಕರು ತೀವ್ರ ಅಸಮಾಧಾನ ಹೊರಹಾಕಿದರು. ಹೈಕಮಾಂಡ್ ಜೊತೆ ಚರ್ಚಿಸಿ ದೆಹಲಿಯಲ್ಲಿ ಹೋರಾಟ ನಡೆಸೋಣ. ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಿ ಎಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಒತ್ತಾಯಿಸೋಣ ಎಂದು ಶಾಸಕರು ಒಕ್ಕೊರಲಿನಿಂದ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಶಾಸಕರು ಮತ್ತು ಸಂಸದರು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಕ್ರಮವನ್ನು ಖಂಡಿಸಿದರು ಮತ್ತು ಬಿಜೆಪಿಯ ಇಚ್ಛೆಯ ಮೇರೆಗೆ ರಾಜ್ಯಪಾರು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕಾಂಗ ಪಕ್ಷದ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ''ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ನಿಲ್ಲುವುದಾಗಿ ನಮ್ಮ ಎಲ್ಲ ಶಾಸಕರು ಒಮ್ಮತದಿಂದ ಹೇಳಿದ್ದಾರೆ ಎಂದರು.
“ಸಭೆಯಲ್ಲಿ ಸರ್ವಾನುಮತದಿಂದ ಶಾಸಕರು ಸಿಎಂಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಆರ್ ವಿ ದೇಶಪಾಂಡೆ ಸೂಚಿಸಿ ತನ್ವೀರ್ ಸೇಠ್ ಅನುಮೋದಿಸಿದ್ದಾರೆ. ರಾಜ್ಯಪಾಲರು ಸರಿಯಾದ ತನಿಖೆ ನಡೆಸದೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ನಡೆ ಸರ್ವಾನುಮತದಿಂದ ಖಂಡಿಸಿದ್ದೇವೆ” ಎಂದು ತಿಳಿಸಿದರು.
17ಎ (ಭ್ರಷ್ಟಾಚಾರ ತಡೆ ಕಾಯ್ದೆ) ಅಡಿಯಲ್ಲಿ ಯಾವುದೇ ಸರಿಯಾದ ವಿಚಾರಣೆಯಿಲ್ಲದೆ(ಸಿಎಂ ವಿರುದ್ಧ) ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಿರ್ಧಾರವನ್ನು ನಾವು ಸರ್ವಾನುಮತದಿಂದ ಖಂಡಿಸಿದ್ದೇವೆ, ”ಎಂದು ಡಿಸಿಎಂ ಹೇಳಿದರು.
“ಪಕ್ಷದ ಎಲ್ಲ ಶಾಸಕರು ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದೇವೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು ಭಾಗವಹಿಸಿದ್ದರು. ಸ್ಪೀಕರ್ ಆದೇಶದಂತೆ ಆರು ಶಾಸಕರು ದೆಹಲಿಯಲ್ಲಿ ನಡೆಯುತ್ತಿರುವ ತರಬೇತಿಗೆ ತೆರಳಿದ್ದು, ಉಳಿದ ಎಲ್ಲಾ ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದೆಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ” ಎಂದು ಹೇಳಿದರು.
“ಕರ್ನಾಟಕದ ಜನತೆ 136 ಸ್ಥಾನಗಳನ್ನು ನೀಡಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಜನರ ಆಶೀರ್ವಾದದಿಂದ ರಚಿಸಲಾಗಿರುವ ಈ ಕಾಂಗ್ರೆಸ್ ಸರ್ಕಾರವನ್ನು ಅಭದ್ರಗೊಳಿಸಲು ಪ್ರಯತ್ನಿಸುತ್ತಿವೆ. ಅವರು ಏನೇ ಪ್ರಯತ್ನಿಸಿದರು ಸರ್ಕಾರವನ್ನು ಜಗ್ಗಿಸಲು ಅವರಿಂದ ಸಾಧ್ಯವಿಲ್ಲ. ಇಡೀ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಿದ್ದರಾಮಯ್ಯ ಅವರ ಪರವಾಗಿ ಇದೆ” ಎಂದರು.
Advertisement