ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ರಾಜ್ಯಪಾಲ ಅನುಮತಿ ನೀಡಿರುವ ಹಿಂದೆ ಬಿಜೆಪಿ ನಾಯಕತ್ವದ ಪಿತೂರಿ ಇದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲ, ಹೈಕಮಾಂಡ್ ನಾಯಕರ ಜೊತೆ ನಡೆದ ಸಭೆಯಲ್ಲಿ ಕರ್ನಾಟಕದಲ್ಲಿನ ಪರಿಸ್ಥಿತಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಎಲ್ಲ ವಿವರಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್‍ನವರು ಪಂಜರದ ಗಿಣಿಯಾಗಿರುವ ರಾಜ್ಯಪಾಲರನ್ನು ಬಳಸಿಕೊಂಡು ಚುನಾಯಿತ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಸೋಲಿನ ಹತಾಶೆಯಿಂದ ಪ್ರಧಾನಿ, ಗೃಹ ಸಚಿವರು ಮಹಾಗೂ ಇಡೀ ಬಿಜೆಪಿ ನಾಯಕತ್ವ ಕಾಣದ ಕೈಗಳಾಗಿ ರಾಜ್ಯಪಾಲರ ಹಿಂದೆ ನಿಂತುಕೊಂಡು ಪಿತೂರಿ ಮಾಡುತ್ತಿವೆ ಎಂದು ಹೇಳಿದರು.
ಇದು ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಮಾತ್ರವಲ್ಲ. ರಾಜ್ಯದ ಸುಮಾರು 4 ಕೋಟಿ ಕನ್ನಡಿಗ ಸಹೋದರ, ಸಹೋದರಿಯರಿಗೆ ಪ್ರಯೋಜನ ಕಲ್ಪಿಸುತ್ತಿರುವ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಮೇಲಿನ ದಾಳಿಯಾಗಿದೆ. ಪ್ರತಿ ವರ್ಷ ನಾವು ರಾಜ್ಯದ ಜನರಿಗೆ 53 ಸಾವಿರ ಕೋಟಿ ರೂ.ಗಳನ್ನು ಈ ಗ್ಯಾರಂಟಿಗಳ ಮೂಲಕ ಪಾರದರ್ಶಕವಾಗಿ ತಲುಪಿಸುತ್ತಿದ್ದೇವೆ.ಕೇಂದ್ರ ಸರಕಾರದ ದೌರ್ಜನ್ಯಗಳನ್ನು ಎದುರಿಸುತ್ತೇವೆ. ರಾಜ್ಯಪಾಲರು ನೀಡಿರುವ ಅನುಮತಿಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಜೊತೆಗೆ, ಈ ವಿಚಾರವನ್ನು ಜನತಾ ನ್ಯಾಯಾಲಯಕ್ಕೂ ತೆಗೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು.
ನಾವೆಲ್ಲ ಒಗ್ಗಟ್ಟಾಗಿ ಹೋರಾಡುತ್ತೇವೆ. ಈ ಹೋರಾಟದಲ್ಲಿ ಮುಖ್ಯಮಂತ್ರಿ ಜೊತೆ ನಾವು ನಿಂತಿದ್ದೇವೆ. ರಾಜ್ಯಪಾಲರು ನೀಡಿರುವ ಅನುಮತಿ ಸಂವಿಧಾನ ಬಾಹಿರ, ಕಾನೂನಿಗೆ ವಿರುದ್ಧವಾದದ್ದು. ಕಾನೂನು ಹೋರಾಟದಲ್ಲಿ ನಾವು ಗೆಲ್ಲುತ್ತೇವೆ. ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವುದು ಸೇರಿದಂತೆ ಎಲ್ಲ ಆಯ್ಕೆಗಳು ನಮ್ಮ ಮುಂದೆ ಇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ-ಜೆಡಿಎಸ್ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಶಶಿಕಲಾ ಜೊಲ್ಲೆ ಅವರ ವಿರುದ್ಧ ಪ್ರಾಸಿಕ್ಯೂಷನ್ ಮಾಡಲು ರಾಜ್ಯಪಾಲರು ಏಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ತಮ್ಮ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಕಾನೂನುಬಾಹಿರವಾಗಿದೆ. ಈಗಾಗಲೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದೇವೆ. ಆಗಸ್ಟ್ 29 ರಂದು ಪ್ರಕರಣ ಬರಲಿದೆ. ನಾವು ನೆಲದ ಕಾನೂನಿನ ಮೇಲೆ ನಂಬಿಕೆ ಇಟ್ಟಿದ್ದೇವೆ. ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರವು ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿದೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗುತ್ತದೆ" ಎಂದು ಅವರು ಹೇಳಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಪಕ್ಷವು ಒಗ್ಗಟ್ಟಿನಿಂದ ನಿಂತಿದೆ. ಮತ್ತು ನ್ಯಾಯಾಲಯದಲ್ಲಿ ಈ ವಿಷಯವನ್ನು ಮುಂದುವರಿಸುತ್ತೇವೆ .ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷದ ಮುಖಂಡರು ಸಿದ್ದರಾಮಯ್ಯ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ, ದೀನದಲಿತರ ಮೇಲೆತ್ತುವ ಅವರ ನಿರಂತರ ಪ್ರಯತ್ನಗಳಿಗೆ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.
Advertisement