ಸರ್ಕಾರ ಬೀಳಿಸಲು ಮತ್ತೆ ಆಪರೇಷನ್ ಕಮಲ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 100 ಕೋಟಿ ರು. ಆಫರ್; ಗಣಿಗ ರವಿಕುಮಾರ್ ಆರೋಪ
ಮಂಡ್ಯ: ಸರ್ಕಾರ ಬೀಳಿಸಲು ಸಂಚು ನಡೆಯುತ್ತಿದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿಯವರು 100 ಕೋಟಿ ರೂ. ಆಫರ್ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿದೆ, ಅಲುಗಾಡಿಸಲು ಆಗಲ್ಲ. ಆದರೆ, ಬಿ.ಎಲ್.ಸಂತೋಷ್, ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ ಮತ್ತು ಪ್ರಹ್ಲಾದ್ ಜೋಶಿ ಅವರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಐದು ವರ್ಷ ಅಧಿಕಾರದಲ್ಲಿರುತ್ತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾರೆ ಎಂದು ಹೇಳಿದರು. ಸರ್ಕಾರ ಬೀಳಿಸುವುದಾಗಿ ಪ್ರಧಾನಿ ಮೋದಿ ಅವರಿಗೆ ಐದು ಜನ ಮಾತು ಕೊಟ್ಟಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯ ಬ್ರೋಕರ್ಗಳು ಡಿಮ್ಯಾಂಡ್ ಮಾಡುತ್ತಿದ್ದಾರೆ. ನಿತ್ಯ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ, ನಮ್ಮ ಶಾಸಕರು ಬಲಿಯಾಗಲ್ಲ. ನಾವು ಸಾಕ್ಷಿ ಕಲೆ ಹಾಕುತ್ತಿದ್ದೇವೆ, ಇಡಿ ಅಧಿಕಾರಿಗಳಿಗೆ ಕೊಡುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಇದೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ಬಿಜೆಪಿಯ ಯಾರಿಗೂ ತಾಕತ್ತಿಲ್ಲ ಎಂದರು.
ಸುಮಾರು 50 ಮಂದಿ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಅವರಲ್ಲಿ ನನ್ನನ್ನು ಸಹ ದೂರವಾಣಿ ಮೂಲಕ ಸಂಪರ್ಕ ಮಾಡಿ ಆಫರ್ ಮಾಡಿದ್ದಾರೆ. ನನ್ನ ಬಳಿ ಕಾಲ್ ರೆಕಾರ್ಡ್ ಇದೆ. ಇನ್ನೂ ಇದರ ಬಗ್ಗೆ ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದೇವೆ. ಸಾಕ್ಷಿ ಸಮೇತ ರೆಡ್ ಹ್ಯಾಂಡ್ ಆಗಿ ಐಟಿ, ಇಡಿ ಅವರಿಗೆ ಹಿಡಿದು ಕೊಡುತ್ತೇವೆ. ನಮ್ಮ ಸರ್ಕಾರ ಬಂಡೆಯಂತೆ ಸ್ಥಿರವಾಗಿ ಇದೆ. ಯಾರು ನಮ್ಮ ಸರ್ಕಾರವನ್ನು ಕೆಡವಲು ಸಾಧ್ಯವಿಲ್ಲ. 5 ವರ್ಷ ರಾಜ್ಯದಲ್ಲಿ ನಮ್ಮ ಸರ್ಕಾರ ಇರುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ತಂತ್ರ ವಿಫಲಗೊಳಿಸಲು ಕಾಂಗ್ರೆಸ್ ರಣತಂತ್ರ ಮಾಡುತ್ತೇವೆ. ಪ್ರಾಸಿಕ್ಯೂಷನ್ ಬಗ್ಗೆ ರಾಜ್ಯಪಾಲರಿಗೆ ಕಾಮನ್ ಸೆನ್ಸ್ ಇರಬೇಕಿತ್ತು. ಬೀದಿಲಿ ಹೋಗುವವರೆಲ್ಲ ಅವರ ಮೇಲೆ ಪ್ರಾಸಿಕ್ಯೂಷನ್ ಕೊಡಿ, ಇವರ ಮೇಲೆ ಕೊಡಿ ಅಂತ ಪತ್ರ ಕೊಟ್ಟರೆ ರಾಜ್ಯ ನಡೆಸುವುದು ಹೇಗೆ? 17B ಯಲ್ಲಿ ಸರಿಯಾಗಿ ನಮೂದಾಗಿದೆ ತನಿಖಾ ಅಧಿಕಾರಿ ಕೇಳಿದರೆ ಮಾತ್ರ ಕೊಡಬೇಕು. ರಾಜ್ಯಪಾಲರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ಬಿಜೆಪಿಯ ಏಜೆಂಟರು ಎಂದು ಆರೋಪ ಮಾಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ