ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ: ಬಸವರಾಜ ಬೊಮ್ಮಾಯಿ ಆರೋಪ
ಹುಬ್ಬಳ್ಳಿ: ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ ಎಂಬುದು ಅವರ ಆಂತರಿಕ ವಿಚಾರ, ಆದರೆ ರಾಜ್ಯದಲ್ಲಿ ನಡೆಯುತ್ತಿರುವುದು ನಿರ್ಣಾಯಕ, ರಾಜ್ಯದಲ್ಲಿ ಆಡಳಿತ ಸಂಪೂರ್ಣ ಸ್ಥಗಿತಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಅವರಿಗೆ ಬಿಟ್ಟದ್ದು ಎಂದರು.
ಪ್ರತಿಪಕ್ಷಗಳ ಆರೋಪಗಳನ್ನು ಎದುರಿಸಲು ಮುಖ್ಯಮಂತ್ರಿ ಸಭೆ ಬಳಿಕ ಸಭೆ ನಡೆಸುತ್ತಿದ್ದಾರೆ. ಉತ್ತಮ ಆಡಳಿತ ನೀಡಲು ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡಿದರು. ಸರ್ಕಾರದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಬರಗಾಲದಲ್ಲೂ ಸೂಕ್ತ ಪರಿಹಾರ ಕ್ರಮ ಕೈಗೊಂಡಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಿಗೆ ಯಾವುದೇ ಪರಿಹಾರ ನೀಡಿಲ್ಲ. ವಿಡಿಯೋ ಕಾಲ್ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ರಾಜ್ಯದಲ್ಲಿ ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸುತ್ತಿಲ್ಲ. ಇಂತಹ ಸರಕಾರ ಬೇಕಾ ಎಂಬ ಪ್ರಶ್ನೆ ಎದ್ದಿದೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯನವರಿಗೆ ಹೈಕಮಾಂಡ್ ಬೆಂಬಲ ಕುರಿತ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, "ಹೈಕಮಾಂಡ್ ರಕ್ಷಣೆ ಎಷ್ಟು ದಿನ ಎಂಬುದು ಅವರಿಗೆ ಬಿಟ್ಟದ್ದು, ಒಂದು ವರದಿ ಸಿಎಂಗೆ ರಕ್ಷಣೆ ಇದೆ ಎಂದು ಹೇಳಿದರೆ, ಇನ್ನೊಂದು ವರದಿಯಲ್ಲಿ ಪ್ರಾದೇಶಿಕ ಪಕ್ಷದಂತೆ ವರ್ತಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆಯಂತೆ ಎಂದರು. ಇದೇ ವೇಳೆ ಅಹಿಂದ ಆಯೋಜಿಸಿದ್ದ ‘ರಾಜಭವನ ಚಲೋ’ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಇದು ಕಾಂಗ್ರೆಸ್ ಪ್ರೇರಿತ ಆಂದೋಲನ ಎಂದು ಟೀಕಿಸಿದರು.
ಈ ಮಧ್ಯೆ ಶಿಗ್ಗಾವ್ ಉಪಚುನಾವಣೆಯಲ್ಲಿ ತಮ್ಮ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ಬಯಸಿಲ್ಲ. ಅವರು ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ