ಅಕ್ರಮ ಗಣಿ ಗುತ್ತಿಗೆ ಪ್ರಕರಣದಲ್ಲಿ ಸಹಿ ಮಾಡಿಲ್ಲ ಎನ್ನುವ 'ಸಚ್ಚಾ' ಕುಮಾರಸ್ವಾಮಿ ಇನ್ನೂ ಫೋರ್ಜರಿ ಕೇಸ್ ಯಾಕೆ ದಾಖಲಿಸಿಲ್ಲ?

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಾನು ಸಹಿಯೇ ಮಾಡಿಲ್ಲ. ಹತ್ತು ವರ್ಷಗಳ ಹಿಂದೆಯೇ ಬೇಲ್ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Updated on

ಬೆಂಗಳೂರು: ಅಕ್ರಮ ಗಣಿ ಗುತ್ತಿಗೆ ಪ್ರಕರಣದಲ್ಲಿ ನಾನು ಸಹಿಯೇ ಮಾಡಿಲ್ಲ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಸಹಿ ಫೋರ್ಜರಿಯಾಗಿರುವ ಬಗ್ಗೆ ಇನ್ನೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಪ್ರಶ್ನಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಾನು ಸಹಿಯೇ ಮಾಡಿಲ್ಲ. ಹತ್ತು ವರ್ಷಗಳ ಹಿಂದೆಯೇ ಬೇಲ್ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ. ಅವರು ಸಹಿ ಮಾಡಿಲ್ಲ ಅಂತಾದರೆ ಅದು ಫೋರ್ಜರಿಯಾಗಿರುತ್ತದೆ. ತಮ್ಮ ಸಹಿ ಫೋರ್ಜರಿಯಾದರೂ ಕುಮಾರಸ್ವಾಮಿ ಇನ್ನೂ ಯಾಕೆ ಒಂದೇ ಒಂದು ದೂರು ದಾಖಲಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ JD(S) ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲು ಆಡಳಿತಾರೂಢ ಕಾಂಗ್ರೆಸ್ ಆಗಸ್ಟ್ 31ರಂದು ರಾಜಭವನಕ್ಕೆ ಪಾದಯಾತ್ರೆ ನಡೆಸಲಿದೆ ಎಂದು ಡಿಸಿಎಂ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಶಾಸಕರು ಮತ್ತು ಸಂಸದರು ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದ್ದಾರೆ.

2007ರ ಅಕ್ಟೋಬರ್‌ನಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ನೀಡುವ ಕಡತದಲ್ಲಿ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಫೋರ್ಜರಿ ವಿರುದ್ಧ ಇದುವರೆಯೂ ಏಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿದರು.

ಗಣಿ ಗುತ್ತಿಗೆಗೆ ಶಿಫಾರಸು ಮಾಡಿದ್ದನ್ನು ಜಾಮೀನು ಕೋರಿ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಜೆಡಿ (ಎಸ್) ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಒತ್ತಾಯಿಸಿ ಆಗಸ್ಟ್ 31 ರಂದು ಬೆಳಗ್ಗೆ 10:30 ಕ್ಕೆ, ನಮ್ಮ ಎಲ್ಲಾ ಶಾಸಕರು, ಎಂಎಲ್‌ಸಿಗಳು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಎಲ್ಲಾ ಸಚಿವರು, ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ಮೆರವಣಿಗೆ ನಡೆಸಿ, ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದರು.

"ಪ್ರಾಸಿಕ್ಯೂಷನ್ ಅನುಮತಿ ಕೋರಿರುವ ಬಾಕಿ ಉಳಿದಿರುವ ಎಲ್ಲಾ ಮನವಿಗಳಿಗೆ ರಾಜ್ಯಪಾಲರು ಅನುಮತಿ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಈ ಪ್ರಕರಣಗಳ ಕುರಿತು ಈಗಾಗಲೇ ತನಿಖೆ ಮಾಡಲಾಗಿದೆ. ಆದರೂ ಅನುಮತಿ ನೀಡಿಲ್ಲ. ಹೀಗಾಗಿ ರಾಜ್ಯಪಾಲರ ಭೇಟಿಗಾಗಿ ಸಮಯ ಕೋರಿ ಪಕ್ಷದಿಂದ ರಾಜಭವನಕ್ಕೆ ಪತ್ರ ಕಳುಹಿಸುತ್ತಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ನಾವು ಬೇಡಿಕೆ ಸಲ್ಲಿಸುತ್ತೇವೆ” ಎಂದು ಡಿಸಿಎಂ ಸುದ್ದಿಗಾರರಿಗೆ ತಿಳಿಸಿದರು.

ಶಿವಕುಮಾರ್ ಅವರ ಬೇಡಿಕೆ ಕೇವಲ ಕುಮಾರಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ಬಿಜೆಪಿಯ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜಿ ಜನಾರ್ದನರೆಡ್ಡಿ ಮತ್ತು ಕಾಂಗ್ರೆಸ್‌ನವರ ವಿರುದ್ಧವೂ ತನಿಖೆ ಪೂರ್ಣಗೊಂಡಿರುವ ಎಲ್ಲಾ ಪ್ರಕರಣಗಳಲ್ಲೂ ಅನುಮತಿ ನೀಡಬೇಕು ಎಂದರು.

ಡಿಕೆ ಶಿವಕುಮಾರ್
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಸಂಬಂಧ HDK ಜೊತೆ ಚರ್ಚೆ: ಯೋಗೇಶ್ವರ್ ಪರ ಅಶೋಕ್ ಬ್ಯಾಟಿಂಗ್

ರಾಜ್ಯಪಾಲರು ಯಾವ ತನಿಖೆಯೂ ಇಲ್ಲದೆ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ರಾಜ್ಯದಲ್ಲಿ ಅನೇಕ ಪ್ರಕರಣಗಳ ಪೈಕಿ 4 ಪ್ರಮುಖ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಲಾಗಿದೆ. ಆದರೆ ರಾಜ್ಯಪಾಲರು ಅನುಮತಿ ನೀಡಿಲ್ಲ ಎಂದರು.

ಕುಮಾರಸ್ವಾಮಿ ಸತ್ಯಕ್ಕೆ ಹೆಸರಾದವರು. ನಾನು ಗಣಿಗುತ್ತಿಗೆಗೆ ಸಹಿ ಮಾಡಿಲ್ಲ ಎಂದು ಹೇಳಿದ್ದಾರೆ. ಪ್ರಕರಣ ನಡೆದು 10 ವರ್ಷ ಆಗಿದೆ. ಇದರ ಬಗ್ಗೆ ಮಾತನಾಡಿದರೆ ಡಿಕೆಶಿ ನನ್ನ ಕುಟುಂಬದ ವಿರುದ್ಧ ಬಂದು ಬಿಟ್ನಾ ಎಂದು ಹೇಳುತ್ತಾರೆ ಎಂದರು.

ಹಾಗಾದರೆ ನಿಮ್ಮ ಸಹಿಯನ್ನು ಯಾರು ನಕಲಿ ಮಾಡಿದ್ದಾರೆ? ಯಾಕೆ ಈ ಬಗ್ಗೆ ದೂರು ಕೊಟ್ಟಿಲ್ಲ? ಸಿಎಂ ಸಹಿಯೇ ನಕಲಿ ಮಾಡಿದ್ದಾರೆ ಎಂದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಬೇಕಲ್ಲವೇ? ಸಹಿಯನ್ನು ದುರುಪಯೋಗ ಮಾಡಿದರೆ ಹೇಗೆ? ಕೇಂದ್ರ ಸಚಿವ ಎಲ್ಲಾದರೂ ಈ ಬಗ್ಗೆ ದೂರನ್ನು ನೀಡಲಿ, ದೆಹಲಿಯಲ್ಲಾದರೂ ಕೊಡಲಿ, ಚನ್ನಪಟ್ಟಣದಲ್ಲಾದರೂ ಕೊಡಲಿ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com