ವಿಜಯೇಂದ್ರ ಹೇಳಿದ್ದಾರೆ ಎಂದು ನಾನು ರಾಜೀನಾಮೆ ನೀಡಲು ಸಾಧ್ಯವೇ?: ಸಿಎಂ ಸಿದ್ದರಾಮಯ್ಯ

ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ನಾನು ಹೇಳುತ್ತೇನೆ. ಅವರು ರಾಜೀನಾಮೆ ಕೊಡುತ್ತಾರಾ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಹುಬ್ಬಳ್ಳಿ: ವಿಜಯೇಂದ್ರ ಕೇಳಿದ ಕೂಡ್ಲೇ ನಾನು ರಾಜೀನಾಮೆ ಕೊಡಬೇಕಾ? ಮುಡಾ ಹಗರಣದಲ್ಲಿ ಯಾಕೆ ರಾಜೀನಾಮೆ ಕೊಡಬೇಕು? ವಿಜಯೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ನಾನು ಹೇಳುತ್ತೇನೆ. ಅವರು ರಾಜೀನಾಮೆ ಕೊಡುತ್ತಾರಾ?" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ. ನಾಳೆ ಶಾಸಕರು, ಸಂಸದರು, ಎಂಎಲ್​ಸಿಗಳು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ. ಕುಮಾರಸ್ವಾಮಿ, ನಿರಾಣಿ, ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್​ಗೆ ಒತ್ತಾಯಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ತನಿಖೆ ಆಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಆದರೂ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿಲ್ಲ. ಹೀಗಾಗಿ ನಾಳೆ ನಮ್ಮ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಒತ್ತಾಯಿಸುತ್ತಾರೆ" ಎಂದರು.

ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ನಮ್ಮ ಶಾಸಕರು ದುಡ್ಡಿನ ಆಸೆಗೆ ಬಲಿಯಾಗುವುದಿಲ್ಲ. ಬಿಜೆಪಿಯವರು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದು ನಿಜ ಎಂದು ಶಾಸಕ ರವಿ ಗಣಿಗ ನನ್ನ ಬಳಿಯೂ ಹೇಳಿದ್ದಾರೆ. ರಾಜ್ಯದಲ್ಲಿ ಬಿಜೆಪಿಯವರು ಎಂದಿಗೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಾರದೇ, ಆಪರೇಷನ್ ಕಮಲ ಮಾಡಿ, ಹಿಂಬಾಗಿಲಿನಿಂದ 2008, 2018 ರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯವರು ಇಂತಹ ಪ್ರಯತ್ನಕ್ಕೆ ಈಗಲೂ ಕೈಹಾಕಿದ್ದು, 136 ಶಾಸಕರ ಬಲವಿರುವ ನಮ್ಮ ಸರ್ಕಾರವನ್ನು ಅಭದ್ರಗೊಳಿಸುವುದು ಸುಲಭದ ಮಾತಲ್ಲ ಎಂದು ಹೇಳಿದ್ದಾರೆ. ಮಹದಾಯಿ ಯೋಜನೆಗೆ ಚಾಲನೆ ನೀಡಲು ಸರ್ಕಾರ ಸಿದ್ದವಿದೆ. ಆದರೆ ಕೇಂದ್ರದಿಂದ ಪರಿಸರ ತೀರುವಳಿ ನೀಡುವುದು ಬಾಕಿ ಇದ್ದು, ತೀರುವಳಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು.

ನಿನ್ನೆ 16ನೇ ಹಣಕಾಸು ಆಯೋಗದವರೊಂದಿಗೆ ಸಭೆ ನಡೆದಿದ್ದು, ತೆರಿಗೆ ಹಂಚಿಕೆ ಹಾಗೂ ವಿಶೇಷ ಅನುದಾನಗಳ ಬಗ್ಗೆ ರಾಜ್ಯದ ನಿಲುವನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದರ ಬಗ್ಗೆ ನವದೆಹಲಿಯಲ್ಲಿ ಸರಕಾರ ಪ್ರತಿಭಟನೆ ನಡೆಸಿತ್ತು. ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂ.ಗಳು ರಾಜ್ಯಕ್ಕೆ ಬಿಡುಗಡೆ ಆಗಿರಲಿಲ್ಲ. ರಾಜ್ಯಕ್ಕೆ ಹಂಚಿಕೆಯಾಗುತ್ತಿದ್ದ ತೆರಿಗೆ ಪ್ರಮಾಣ 4.713 ರಿಂದ 3.647 ಗೆ ಇಳಿದಿದ್ದು, 1.66 ರಷ್ಟು ಕಡಿಮೆಯಾಗಿದೆ. ಈ ಎಲ್ಲ ಕಾರಣಗಳಿಂದ ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಸುಮಾರು 80,000 ಕೋಟಿ ರೂ. ನಷ್ಟವಾಗಿದೆ. ಈ ಕೊರತೆಯನ್ನು ಸರಿದೂಗಿಸಲು ನಿನ್ನೆ ನಡೆದ ಸಭೆಯಲ್ಲಿ ಆಯೋಗದವರಿಗೆ ವಿವರಿಸಲಾಗಿದೆ.

ಸಿಎಂ ಸಿದ್ದರಾಮಯ್ಯ
ರಾಜೀನಾಮೆ ಇಲ್ಲ; ಮತ್ತೆ ಹೋರಾಟದ ಹಾದಿ ಹಿಡಿದ ಸಿದ್ದರಾಮಯ್ಯ (ಸುದ್ದಿ ವಿಶ್ಲೇಷಣೆ)

ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ ವಿಪಕ್ಷದವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ.

ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು. ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com