ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ನನಗೆ ಪ್ರಮೋಷನ್ ಸಿಕ್ಕರೆ ಸಂತೋಷವಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಶುಕ್ರವಾರ ಹೇಳಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಅಕ್ರಮವಾಗಿ ಸೈಟ್ ಪಡೆದ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಹುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪಕ್ಷ ಪರಮೇಶ್ವರ ಅವರಿಗೆ ಬಡ್ತಿ ನೀಡಿದರೆ ಸಂತೋಷವಾಗುತ್ತದೆ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಪ್ರಮೋಷನ್ ಸಿಕ್ಕರೆ ನನಗೂ ಸಂತೋಷವಾಗುತ್ತದೆ ಎಂದರು.
ಈ ಹಿಂದೆ ನಾಯಕತ್ವ ಬದಲಾವಣೆಯಾಗುವುದಾದರೆ ದಲಿತರು ಸಿಎಂ ಆಗಲಿ ಎಂದು ಸಿಎಂ ಸಿದ್ದರಾಮಯ್ಯ ಪಾಳಯ ಬ್ಯಾಟಿಂಗ್ ಮಾಡಿತ್ತು. ಪರಮೇಶ್ವರ್ ಅವರು ಸಹ ಸಿಎಂ ಆಗುವ ಆಸೆ ಇಲ್ಲ ಎಂದು ಹೇಳುವುದಕ್ಕೆ ನಾನು ಸನ್ಯಾಸಿಯಲ್ಲ ಎಂದಿದ್ದರು.
ರಾಜ್ಯದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಂತರ ದಲಿತ ಸಮುದಾಯದಿಂದ ಬಂದಿರುವ ಹಿರಿಯ ನಾಯಕ ಪರಮೇಶ್ವರ ಅವರು ಅನುಭವಿ ನಾಯಕರೂ ಹೌದು.
ನಾಳೆ ರಾಜಭವನ ಚಲೋ ಕುರಿತು ಮಾತನಾಡಿದ ಅವರು, ಎಲ್ಲಾ ಶಾಸಕರು, ಎಂಎಲ್‌ಸಿಗಳು ಮತ್ತು ಸಂಸದರು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲರಿಗೆ ಮನವಿ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ತಪ್ಪು ಎಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ರಾಜ್ಯಪಾಲರಿಗೆ ಸಲಹೆ ನೀಡಲು ಸರ್ಕಾರಕ್ಕೆ ಅಧಿಕಾರವಿದ್ದು, ಈ ಸಂಬಂಧ ಸಂಪುಟ ಸಭೆಯ ಸಲಹೆ ಕಳುಹಿಸಿದ್ದೇವೆ. ಅದರಲ್ಲಿ ಎಲ್ಲ ಸಾಕ್ಷ್ಯಗಳನ್ನು ನಮೂದಿಸಿ ಕಳುಹಿಸಲಾಗಿದೆ. ಆದರೂ ಅವರು ಅದಕ್ಕೆ ಬದ್ಧರಾಗಿಲ್ಲ ಎಂದರು.
ಸದ್ಯ ಪ್ರಕರಣ ನ್ಯಾಯಾಲಯದಲ್ಲಿದ್ದು, ಅಂತಿಮ ನಿರ್ಧಾರ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ರಾಜ್ಯಪಾಲರಿಗೂ ತಿಳಿಸುವುದು ನಮ್ಮ ಕರ್ತವ್ಯ. ಮುಡಾ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ನ್ಯಾಯಾಲಯ ಮತ್ತಿತರ ವಿಷಯಗಳ ಬಗ್ಗೆ ಏನೇ ಮಾತನಾಡಿದರೂ ರಾಜಕೀಯ ಬಣ್ಣ ಪಡೆದುಕೊಳ್ಳುತ್ತದೆ. ನಮ್ಮ ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದರು.
Advertisement