ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಸ್ವಾಮೀಜಿ ಚಂದ್ರಶೇಖರ ನಾಥ ಸ್ವಾಮೀಜಿ ವಿರುದ್ಧ ಎಫ್ ಐಆರ್ ಪ್ರಕರಣ ಆಡಳಿತಾರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಡುವಣ ವಾಕ್ಸಮರಕ್ಕೆ ಕಾರಣವಾಗಿರುವಂತೆಯೇ, ವಿಪಕ್ಷ ನಾಯಕ ಆರ್. ಅಶೋಕ್ ಬೆಂಕಿ ಹಚ್ಚಿ ಅದರಲ್ಲಿ ಬಿಡಿ ಸೇದ್ಕೊಂಡು ಕೂತಿದ್ದಾನೆ ಅಂತಾ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಕುರಿತು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಉತ್ತರ ಕೊಟ್ಟಿದ್ದಾರೆ. ಸ್ವಾಮೀಜಿಗಳ ವಿಚಾರಕ್ಕೆ ಉಗ್ರ ಹೋರಾಟ ಮಾಡ್ತಿನಿ ಅಂತಾ ಹೇಳುವ ಅಶೋಕ್, ಬಾಲಗಂಗಾಧರ ಸ್ವಾಮೀಜಿಗಳ ಮೇಲೆ ಕೇಸ್ ಹಾಕಿದಾಗ ಎಲ್ಲೋಗಿದ್ರು? ಜೆಡಿಎಸ್ ಸರ್ಕಾರ ಕೇಸ್ ಹಾಕಿದ್ದಾಗ ಬಿಜೆಪಿಯವರು ಎಲ್ಲಿ ಹೋಗಿದ್ರು ಎಂದು ಪ್ರಶ್ನಿಸಿದರು.
ನಿರ್ಮಲಾನಂದ ಸ್ವಾಮೀಜಿಗಳ ಫೋನ್ ಟ್ಯಾಪ್ ಮಾಡಿದಾಗ ಯಾಕೆ ಮಾತಾಡಲಿಲ್ಲ. ಆಗ ಅಶೋಕ್ ಎಲ್ಲೋಗಿದ್ರು? ನಿರ್ಮಲಾನಂದ ಶ್ರೀಗಳು ಒಬ್ಬ ಕ್ರಿಮಿನಲ್ ತರಹ ಅವರ ನಂಬರ್ ಕೊಟ್ಟಿದ್ದರು. ಅದರ ಸಿಬಿಐ ರಿಪೋರ್ಟ್ ಬಗ್ಗೆ ಗೊತ್ತಿದ್ಯಾ? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್ ಸುಮ್ಮನೆ ಒಣ ರಾಜಕಾರಣ ಬಿಟ್ಟುಬಿಡಿ ಎಂದು ಅಶೋಕ್ ಗೆ ಹೇಳಿದರು.
ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಕಾಂಗ್ರೆಸ್ ಕಚೇರಿ ಹುಡುಗರ ಮೇಲೂ ಕೇಸ್ ಹಾಕಿದ್ರು. ಯಾರು ಕೂಡ ಕಾನೂನಿಗಿಂತ ದೊಡ್ಡವರಲ್ಲ. ನಾನು ಮಾತಾಡಿದ್ರು ಕೇಸ್ ಹಾಕ್ತಾರೆ. ಸಂವಿಧಾನ, ಯಾರ ಹಕ್ಕುಗಳ ಬಗ್ಗೆ ಮಾತನಾಡುವುದಕ್ಕೆ ಅವಕಾಶ ಬೇಡ. ನಮ್ಮದು ಮಾನವ ಧರ್ಮ, ನಮ್ಮದು ಸಂವಿಧಾನ ಎರಡಕ್ಕೂ ನಾವು ಹೆಚ್ಚಿಗೆ ಒತ್ತು ಕೊಟ್ಟು ಹೋಗಬೇಕು ಎಂದು ಸ್ವಾಮೀಜಿಗಳು ಹಾಗೂ ಪೊಲೀಸರಿಗೆ ಹೇಳುತ್ತೇನೆ ಎಂದರು.
ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ಇದ್ದು, ಸಿಎಂಗೆ ಅಭಿನಂದನೆ ಸಲ್ಲಿಸಬೇಕೆಂದು ಹಾಸನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡ್ತೇವೆಂದು ಎಲ್ಲಾರೂ ಮುಂದೆ ಬಂದಿದ್ದಾರೆ. ಕಾಂಗ್ರೆಸ್ ಪಾರ್ಟಿಯ ಎಲ್ಲಾ ಕಾರ್ಯಕ್ರಮಗಳನ್ನು ಜನರು ಅಭಿನಂದಿಸಿದ್ದಾರೆ. ಕಲ್ಯಾಣ ಕರ್ನಾಟದಲ್ಲೊಂದು, ಹಳೆ ಮೈಸೂರು ಭಾಗದಲ್ಲೊಂದು ಕಿತ್ತೂರು ಕರ್ನಾಟಕದಲ್ಲಿ ಜನ ಮತ ನೀಡಿದ್ದಾರೆ. ಜನರಿಗೆ ಉತ್ಸಾಹ ಇದೆ ಆ ಉತ್ಸಾಹಕ್ಕೆ ನಾವು ಸ್ಪೂರ್ತಿ ನೀಡಬೇಕು. ಆ ದೃಷ್ಟಿಯಿಂದ ಪ್ರೋತ್ಸಾಹ ಕೊಟ್ಟು ನಮ್ಮ ಕಾರ್ಯಕ್ರಮವನ್ನ ಪಕ್ಷ ಧ್ವಜದ ಅಡಿಯಲ್ಲಿ ಮಾಡುತ್ತಿದ್ದೇವೆ ಈ ಕಾರ್ಯಕ್ರಮಕ್ಕೆ ಎಲ್ಲಾರು ಕೂಡ ಭಾಗಿಯಾಗಬಹುದು ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Advertisement