ಬೆಂಗಳೂರು: ಸದ್ಯಕ್ಕೆ ಕೆಪಿಸಿಸಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಆಸೆ, ದುರಾಸೆ ನನ್ನಲ್ಲಿಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಒಂದಷ್ಟು ಜನರು ನನ್ನನ್ನು ಖುಷಿಪಡಿಸಲು, ಮತ್ತೆ ಕೆಲವರು ಇನ್ನೊಬ್ಬರನ್ನು ಖುಷಿ ಪಡಿಸಲು ಹಾಗೂ ತಮ್ಮ ಅನುಕೂಲಕ್ಕಾಗಿ ಈ ರೀತಿ ಹೆಸರುಗಳನ್ನು ಹೇಳುತ್ತಿರುತ್ತಾರೆ. ನಾನು ಪ್ರಸ್ತುತ ವಿಶ್ರಾಂತಿಯಲ್ಲಿದ್ದೇನೆ. ಜನರು ಕೊಟ್ಟ ತೀರ್ಪನ್ನು ಪ್ರಸಾದ ಎಂದು ಸ್ವೀಕರಿಸಿ ಕೆಲಸ ಮಾಡುವವನು ನಾನು. ಯಾವುದೇ ಸ್ಥಾನ ಸಿಗಬೇಕು ಅಂತಾದರೆ ಸಿಕ್ಕೇ ಸಿಗುತ್ತದೆ. ಇಲ್ಲದಿದ್ದರೆ ಸಿಗುವುದಿಲ್ಲ. ಯಾವುದೂ ಇಲ್ಲಿ ಸ್ವಂತ ಸ್ವತ್ತಲ್ಲ. ಸಾರ್ವಜನಿಕವಾದ ಹುದ್ದೆಗಳಿವು” ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎನ್ನುವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸರ್ವಪಕ್ಷಗಳ ಹಿರಿಯ ನಾಯಕರಾದ ರಾಜಣ್ಣ ಅವರು ಹೆಚ್ಚು ಶಕ್ತಿ ಇರುವ ನಾಯಕರು. ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಉತ್ತಮವಾಗಿ ಸಂಘಟನೆಯಾಗುತ್ತದೆ ಎನ್ನುವ ವಿಶ್ವಾಸ ಅವರಿಗಿದೆ. ಅವರಿಗೆ ಜನತಾದಳ, ಬಿಜೆಪಿಯವರ ಜೊತೆ ಒಳ್ಳೆ ಸಖ್ಯವನ್ನಿಟ್ಟುಕೊಂಡಿದ್ದಾರೆ. ಅಲ್ಲಿಂದ ಒಂದಷ್ಟು ಜನರನ್ನು ಕರೆದುಕೊಂಡು ಬರಬಹುದು ಎನಿಸುತ್ತದೆ. ಹೀಗಾಗಿ ಅವರು ಪಕ್ಷದ ನೇತೃತ್ವವಹಿಸಲು ತುಡಿತದಲ್ಲಿದ್ದಾರೆ. ಅವರಿಗೆ ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಾವು ಸಹಕಾರ ನೀಡಲು ಸಿದ್ಧ” ಎಂದು ತಿಳಿಸಿದರು. ಚುನಾವಣೆ ದೃಷ್ಟಿಯಿಂದ ಪೂರ್ಣಪ್ರಮಾಣದ ಅಧ್ಯಕ್ಷರ ಅವಶ್ಯಕತೆಯಿದೆಯೇ ಎಂದು ಕೇಳಿದಾಗ “ಸಂಘಟನೆ ಸೇರಿದಂತೆ ಎಲ್ಲ ರಂಗಗಳಲ್ಲೂ ಕೆಲಸ ಮಾಡುವ ಅವಶ್ಯಕತೆ ಪಕ್ಷಕ್ಕಿದೆ. ಜವಾಬ್ದಾರಿ ಹೊತ್ತುಕೊಳ್ಳಲು ಯಾರೇ ಮುಂದೆ ಬಂದರೂ, ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿ ಎಲ್ಲಾ ನಾಯಕರು, ಕಾರ್ಯಕರ್ತರು ಒಪ್ಪಿಕೊಳ್ಳುತ್ತೇವೆ, ಇದರಲ್ಲಿ ಯಾವುದೇ ಅಪಸ್ವರವಿಲ್ಲ ಎಂದರು.
Advertisement