
ಬೆಳಗಾವಿ: ಬೆಳಗಾವಿಯಲ್ಲಿ ನಾಳೆ ಆಯೋಜಿಸಿದ್ದ ಪಂಚಮಸಾಲಿ ಸಮುದಾಯದ ಪ್ರತಿಭಟನೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಬಂಧ ಹೇರಿರುವುದನ್ನು ಪ್ರತಿಪಕ್ಷ ಬಿಜೆಪಿ ಶಾಸಕರು ಟೀಕಿಸಿದ್ದಾರೆ. ಹಿಟ್ಲರ್ ಸರ್ಕಾರ ಎಂದು ಟೀಕಿಸಿದ ಬಿಜೆಪಿ ಶಾಸಕರು ಚಳಿಗಾಲ ಅಧಿವೇಶನದ ಮೊದಲ ದಿನವೇ ವಿಧಾನಸಭೆಯ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ-2 ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಮಠದ ಬಸವಜಯ ಮೃತ್ಯಂಜಯ ಸ್ವಾಮೀಜಿ ನೇತೃತ್ವದಲ್ಲಿ ನಾಳೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಪ್ರತಿಭಟನೆಯಲ್ಲಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇತ್ತು.
ವಿರೋಧ ಪಕ್ಷದ ನಾಯಕ ಆರ್.ಅಶೋಕ, ಉಪ ನಾಯಕ ಅರವಿಂದ ಬೆಲ್ಲದ್ ಮತ್ತು ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಪಂಚಮಸಾಲಿ ಸಮುದಾಯದ ಪ್ರತಿಭಟನೆ ನಿರ್ಬಂಧಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದರು.
ಪಂಚಮಸಾಲಿ ಸಮುದಾಯದ ನ್ಯಾಯಯುತ ಹೋರಾಟ ಮಾಡುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದಕ್ಕೆ ಸರ್ಕಾರ ವಿವರಣೆ ನೀಡಬೇಕು ಎಂದು ಒತ್ತಾಯಿಸಿ ಶಾಸಕರಾದ ಅರವಿಂದ್ ಬೆಲ್ಲದ್, ಯತ್ನಾಳ್ ಮತ್ತಿತರರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನಿಲ್ಲಿಸಿ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ಯು. ಟಿ. ಖಾದರ್ ಪದೇ ಪದೇ ಮನವಿ ಮಾಡಿದ್ದರೂ ಬಿಜೆಪಿ ಶಾಸಕರು ಪ್ರತಿಭಟನೆ ಮುಂದುವರೆಸಿದರು. ಹೀಗಾಗಿ ಮಧ್ಯಾಹ್ನ 2-30ರವರೆಗೂ ಕಲಾಪವನ್ನು ಸ್ಪೀಕರ್ ಮುಂದೂಡಿದರು.
Advertisement