ಅನ್ನಪೂರ್ಣ ಗೆಲುವು 2028ರ ಚುನಾವಣೆಗೆ ಮುನ್ನುಡಿ; ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ: ಡಿ.ಕೆ ಶಿವಕುಮಾರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದಾಗ ಅನೇಕರು ನಕ್ಕರು. ಉಪಚುನಾವಣೆ ಪ್ರಚಾರಕ್ಕೆ ಬಂದಾಗಲೂ ನಮ್ಮ ಸಂಖ್ಯಾಬಲ 138ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದ್ದೆ.
Dk Shivakumar
ಸಂಡೂರು ಕೃತಜ್ಞತಾ ಸಭೆಯಲ್ಲಿ ಡಿ.ಕೆ ಶಿವಕುಮಾರ್
Updated on

ಬಳ್ಳಾರಿ: ಅನ್ನಪೂರ್ಣ ಅವರನ್ನು ಗೆಲ್ಲಿಸುವ ಮೂಲಕ ಜನರು 2028ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿದ್ದ ಹಿನ್ನೆಲೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿ ರಾಜ್ಯಕ್ಕೆ ಸಂದೇಶ ರವಾನಿಸಿರುವ ಸಂಡೂರು ಮಹಾಜನತೆಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ ಎಂದು ಭಾವಿಸಿ ನಿಮಗೆ ನಮನ ಸಲ್ಲಿಸಲು ನಾನು, ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರೆಲ್ಲರೂ ಬಹಳ ಸಂತೋಷದಿಂದ ಆಗಮಿಸಿದ್ದೇವೆ. ಮಹಾತ್ಮಾ ಗಾಂಧೀಜಿ ಅವರು ಸಂಡೂರನ್ನು ಕರ್ನಾಟಕದ ಕಾಶ್ಮೀರ ಎಂದು ಕರೆದಿದ್ದರು. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ.

ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಸ್ವೀಕಾರ ಮಾಡಿದ ಸ್ಥಾನದಲ್ಲಿ ಇಂದು ಈ ಕಲ್ಯಾಣ ಕರ್ನಾಟಕ ಭಾಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಅವರ ಮಾರ್ಗದರ್ಶನದಂತೆ ನಾನು ಹಾಗೂ ಸಿದ್ದರಾಮಯ್ಯ ಅವರು ಶತಮಾನೋತ್ಸವ ಸಂಭ್ರಮವನ್ನು ಇಡೀ ವರ್ಷ ಆಚರಣೆ ಮಾಡಲು ಮುಂದಾಗಿದ್ದೇವೆ. ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕ್ಷೇತ್ರದ ಜನ ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಾ ಬಂದಿದ್ದೀರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದಾಗ ಅನೇಕರು ನಕ್ಕರು. ಉಪಚುನಾವಣೆ ಪ್ರಚಾರಕ್ಕೆ ಬಂದಾಗಲೂ ನಮ್ಮ ಸಂಖ್ಯಾಬಲ 138ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದ್ದೆ. ಅದರಂತೆ ಅನ್ನಪೂರ್ಣ ಅವರ ಗೆಲುವಿನಿಂದ 138 ಸ್ಥಾನ ಬಂದಿದೆ. ನಮ್ಮ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಗೆದ್ದ ಎಂ.ಪಿ ಪ್ರಕಾಶ್ ಅವರ ಪುತ್ರಿ ಹಾಗೂ ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡರು ಸೇರಿದರೆ ನಮ್ಮ ಸಂಖ್ಯೆ 140 ಆಗುತ್ತದೆ. ಇದರ ಜತೆಗೆ ನಮ್ಮ ಬಿಜೆಪಿ ಸ್ನೇಹಿತರೂ ಇದ್ದಾರೆ. 140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಆರು ತಿಂಗಳಲ್ಲಿ ಕಿತ್ತುಹಾಕುವುದಾಗಿ ಹೇಳುತ್ತಾರೆ. ಇದು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ.

Dk Shivakumar
ಅಧಿಕಾರ ಹಂಚಿಕೆ ಸೂತ್ರವೂ ಇಲ್ಲ ಏನೂ ಇಲ್ಲ, ಯಾರೂ ಈ ಬಗ್ಗೆ ಮಾತನಾಡಬಾರದು: ಡಿಕೆಶಿ ವಾರ್ನ್

ತುಂಗಭದ್ರಾ ಅಣೆಕಟ್ಟಿನ ಕ್ರೇಸ್ಟ್ ಗೇಟ್ ಒಡೆದಾಗ ವಿರೋಧ ಪಕ್ಷಗಳ ನಾಯಕರಿಂದ ಟೀಕೆಗಳ ಸುರಿಮಳೆ ಬಂದವು. ಅಶೋಕ್, ಜನಾರ್ಧನ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿದರು. ಆಗ ನಾನು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದೆ.

ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಮತಗಳ ನಿರೀಕ್ಷೆ ಇತ್ತು. ಬಿಜೆಪಿಯವರು ಇಲ್ಲಿ ಜಾತಿ ರಾಜಕಾರಣ ಮಾಡಿದ್ದರ ಬಗ್ಗೆ ನಮಗೆ ಅರಿವಿದೆ. ಮತ್ತೊಂದು ಕ್ಷೇತ್ರ ಶಿಗ್ಗಾವಿ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ. ಆ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಬಸವರಾಜ ಬೊಮ್ಮಾಯಿ ಅವರು ಗೆದ್ದುಕೊಂಡು ಬಂದಿದ್ದ ಕ್ಷೇತ್ರ. ಇನ್ನು ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆದ್ದಿದ್ದ ಚನ್ನಪಟ್ಟಣದಲ್ಲೂ ಕಾಂಗ್ರೆಸ್ 25 ವರ್ಷಗಳಿಂದ ಗೆದ್ದಿರಲಿಲ್ಲ. ದೇವೇಗೌಡರು ಒಂದು ವಾರಕ್ಕೂ ಹೆಚ್ಚು ಕಾಲ ಚುನಾವಣಾ ಪ್ರಚಾರ ಮಾಡಿದ್ದರು.

ಆದರೆ ಈ ಮೂರು ಕ್ಷೇತ್ರಗಳ ಜನ ಅಭ್ಯರ್ಥಿಗಳಿಗಿಂತ ಗ್ಯಾರಂಟಿ ಯೋಜನೆಗಳಿಗೆ ಮತ ಹಾಕಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ. ಮಾಧ್ಯಮಗಳು ಕೂಡ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಒಂದೊಂದು ಕ್ಷೇತ್ರ ಸಿಗಲಿದೆ ಎಂದು ಸಮೀಕ್ಷೆ ಹೇಳುತ್ತಿವೆ ಎಂದು ಬರೆದರು. ಆದರೆ ನಾವು ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರಕ್ಕೆ ಬಂದ ಕಾರಣ ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ವರ್ಗದ ಜನರಿಗೆ ನೆರವು ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮಹಿಳೆಯರಿಗೆ 2 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಹಾಗೂ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಎಲ್ಲಾ ವರ್ಗಗಳು ಅಧಿಕಾರದಲ್ಲಿ ಇದ್ದಂತೆ. ಅನ್ನಪೂರ್ಣ ಒಬ್ಬರೇ ನಿಮ್ಮ ಶಾಸಕರಲ್ಲ. ಅವರ ಜತೆ ತುಕಾರಾಮ್ ಹಾಗೂ ಸಂತೋಷ್ ಲಾಡ್ ಅವರೂ ಕೂಡ ನಿಮ್ಮ ಋಣ ತೀರಿಸುವ ಕೆಲಸ ಮಾಡಲಿದ್ದಾರೆ. ಜಿಲ್ಲಾ ಸಚಿವರು ಸೇರಿದಂತೆ ಇಡೀ ಸರ್ಕಾರ ಅನ್ನಪೂರ್ಣ ಅವರ ಜತೆಗೆ ನಿಲ್ಲಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com