
ಬೆಂಗಳೂರು: ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಅಧಿವೇಶನಕ್ಕೆ 100 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 27 ರಂದು ಕುಂದಾನಗರಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ಪಾಲ್ಗೊಳ್ಳಲಿದ್ದಾರೆ. ಐತಿಹಾಸಿಕ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಾಂಗ್ರೆಸಿಗನೂ ಸಾಕ್ಷಿಯಾಗಬೇಕು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಕೆಪಿಸಿಸಿಯ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 1924ರಲ್ಲಿ ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿದರು. ಈ ಹೆಮ್ಮೆಯ ಕ್ಷಣವನ್ನು ಆಚರಿಸುವ ಅವಕಾಶ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸಿಗರಿಗೆ ಮಾತ್ರ ಸಿಕ್ಕಿದೆ. ಹೀಗಾಗಿ ಈ ಅವಕಾಶವನ್ನು ಎಲ್ಲರೂ ಬಳಸಿಕೊಳ್ಳಬೇಕು. ಯಶಸ್ವಿ ಕಾರ್ಯಕ್ರಮಕ್ಕಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಹಿರಿಯ ಮುಖಂಡ ಬಿ.ಎಲ್. ಸೇರಿದಂತೆ 60 ಮಂದಿಯನ್ನು ಒಳಗೊಂಡ ಸಮಿತಿ ರಚಿಸಿದ್ದೇವೆ ಎಂದು ತಿಳಿಸಿದರು.
ಗಾಂಧೀಜಿಯವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಸ್ಥಳದಲ್ಲಿಯೇ ಡಿಸೆಂಬರ್ 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಲಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಹಾಗೂ ಎಲ್ಲಾ ಸಿಡಬ್ಲ್ಯೂಸಿ ಸದಸ್ಯರು, ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು, ಸಿಎಲ್ ಪಿ ಮುಖಂಡರು, 150 ಸಂಸದರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಹಾತ್ಮಾ ಗಾಂಧಿ ಅವರ ಪ್ರತಿಮೆ ಉದ್ಘಾಟನೆ ನಡೆಯಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮುಖ್ಯಮಂತ್ರಿಗಳು ಅತಿಥಿಗಳಿಗೆ ಭೋಜನ ಕೂಟ ಆಯೋಜಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.
ದೇಶಕ್ಕೆ 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ನಡಿಗೆಯಲ್ಲಿ ಸುಮಾರು 3 ಲಕ್ಷ ಜನ ಹೆಜ್ಜೆ ಹಾಕಿದ್ದರು. ಆ ಮೂಲಕ ಇತಿಹಾಸ ಪುಟಕ್ಕೆ ಸೇರಿದ್ದಿರಿ. ಈ ಕಾರ್ಯಕ್ರಮ ಮತ್ತಷ್ಟು ಪವಿತ್ರವಾದ ಕಾರ್ಯಕ್ರಮವಾಗಿದ್ದು, ಇದು ಕೇವಲ ಬೆಳಗಾವಿಗೆ ಮಾತ್ರ ಸೀಮಿತವಾಗಬಾರದು. ಅಖಂಡ ಕರ್ನಾಟಕ ಕಾಂಗ್ರೆಸ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಮೈಸೂರು ದಸರಾ ಮಾದರಿಯಲ್ಲಿ ರೂ.8 ಕೋಟಿ ಖರ್ಚು ಮಾಡಿ ದೀಪಾಲಂಕಾರ ಮಾಡಲಾಗುವುದು, ಸಮಾವೇಶದ ಬಗ್ಗೆ ಅರಿವು ಮೂಡಿಸಲು ಕಿತ್ತೂರು ಕರ್ನಾಟಕ ಭಾಗದಲ್ಲಿ ಜಾಗೃತ ಸಭೆ ಮಾಡಲಾಗುವುದು, ಈ ಭಾಗದ ಪ್ರತಿ ಕ್ಷೇತ್ರದಿಂದ ಕನಿಷ್ಠ 5,000 ಜನರನ್ನು ಸಮಾವೇಶಕ್ಕೆ ಕರೆತರಬೇಕು ಎಂದು ಮುಖಂಡರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.
Advertisement