150 ಕೋಟಿ ಆಮಿಷ: ರಾಜಕೀಯ ಒತ್ತಡದಿಂದ ಅನ್ವರ್ ಮಾಣಿಪ್ಪಾಡಿ ಯೂಟರ್ನ್ - ಡಿಕೆ ಶಿವಕುಮಾರ್
ಬೆಳಗಾವಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು 150 ಕೋಟಿ ರೂ. ಆಮಿಷವೊಡ್ಡಿದ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅವರು ರಾಜಕೀಯ ಒತ್ತಡದಿಂದ ಯೂ ಟರ್ನ್ ಹೊಡೆದಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸೋಮವಾರ ಹೇಳಿದ್ದಾರೆ.
ಇಂದು ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿ ಅವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಪ್ರಧಾನಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು. ಅವರು ಹೇಳಿರುವ ವಿಚಾರಗಳನ್ನು ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿಯೂ ಉಲ್ಲೇಖಿಸಿದ್ದಾರೆ. ಈ ದಾಖಲೆಗಳು ಎಲ್ಲೂ ಹೋಗಲು ಸಾಧ್ಯವಿಲ್ಲ. ನಾವು ದಾಖಲೆ ಬಿಡುಗಡೆ ಮಾಡುವ ಮುನ್ನ ಅವರೇ ಈ ದಾಖಲೆಗಳನ್ನು ಬಿಡುಗಡೆ ಮಾಡಲಿ" ಎಂದರು.
ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಎಲ್ಲ ಸಂಗತಿಗಳು ನಮ್ಮ ಮುಂದಿವೆ. ಸಿಬಿಐ ತನಿಖೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಿ. ಆಮೇಲೆ ಯೋಚಿಸುತ್ತೇವೆ. ಈ ವಿಷಯ ಸಿಬಿಐಗೆ ಗೊತ್ತಿದ್ದು, ಸಿಬಿಐ ತನಿಖೆಗೆ ಮುಂದಾಗಲಿ ಎಂದರು.
ಈ ವಿಚಾರವಾಗಿ ಯಾಕೆ ಗೊಂದಲ ಮಾಡಲಾಗುತ್ತಿದೆ ಎಂದು ಕೇಳಿದಾಗ, "ಗೊಂದಲ ಮಾಡುತ್ತಿರುವವರು ನೀವು. ಅವರ ಹೇಳಿರುವ ಮಾತನ್ನು ನೀವು ಪ್ರಕಟಿಸಿದ್ದೀರಿ. ಈ ವಿಚಾರವನ್ಮು ಸಿಎಂ ಟ್ವೀಟ್ ಮಾಡಿದ್ದಾರೆ. ಈ ವಿಚಾರ ಮುಚ್ಚಿಕೊಳ್ಳಲು ಅವರಿಂದ ವಿಭಿನ್ನ ಹೇಳಿಕೆ ಕೊಡಿಸಲಾಗಿದೆ. ಅವರು ಹೇಳಿಕೆ ನೀಡಿರುವುದು ಸತ್ಯ. ಬೇಕಾದರೆ ಅವರ ಧ್ವನಿ ನೀವೇ ಪರಿಶೀಲಿಸಿ" ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ನಾಯಕರು ತಮಗೆ ಆಫರ್ ಕೊಟ್ಟಿದ್ದಾರೆ ಎಂಬ ಅನ್ವರ್ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ‘ಈ ವಿಚಾರವನ್ನು ಹಿಂದೆಯೇ ಹೇಳಬೇಕಿತ್ತು, ಈಗ ಹೇಳಿದರೆ ಏನು ಪ್ರಯೋಜನ? ಅಧಿಕಾರ ಇದ್ದಾಗ ಏನು ಹೇಳುತ್ತೇವೆ ಎಂಬುದು ಮುಖ್ಯ" ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ