
ಬೆಳಗಾವಿ: ವಕ್ಫ್ ಆಸ್ತಿ ವಿವಾದ ವಿಧಾನಸಭೆಯಲ್ಲಿಂದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಣ ಭಾರೀ ಜಟಾಪಟಿಗೆ ಕಾರಣವಾಯಿತು. ರೈತರು, ದೇವಾಲಯಗಳು, ಮಠಗಳು ಸೇರಿದಂತೆ ಇನ್ನಿತರಿಗೆ ವಕ್ಫ್ ಮಂಡಳಿಯಿಂದ ನೀಡಿರುವ ನೋಟಿಸ್ ಕುರಿತು ಬಿಜೆಪಿ ಸರ್ಕಾರ ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮುಗಿಬಿದ್ದಿತು. ಬಿಜೆಪಿ ಆರೋಪ ಕುರಿತು ಪ್ರತಿಕ್ರಿಯಿಸಿದ ವಕ್ಫ್ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್, ಒಂದು ವೇಳೆ ರೈತರು ಹಾಗೂ ದೇವಾಲಯಗಳಿಗೆ ನೋಟಿಸ್ ನೀಡಿದ್ದರೆ ಅವುಗಳನ್ನು ಹಿಂಪಡೆಯುವುದಾಗಿ ಸದನಕ್ಕೆ ಭರವಸೆ ನೀಡಿದರು.
ಜಮೀರ್ ಅಹ್ಮದ್ ಖಾನ್ ಅವರ ಮಾತನ್ನೇ ಪುನರುಚ್ಚರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಳುಮೆ ಮಾಡುತ್ತಿರುವ ಭೂಮಿಯಿಂದ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಸದನಕ್ಕೆ ತಿಳಿಸಿದರು. ಕೇವಲ ನೋಟಿಸ್ ಹಿಂಪಡೆದರೆ ಸಾಲದು, ಸರ್ಕಾರಿ ದಾಖಲೆಗಳಲ್ಲಿ ವಕ್ಫ್ ಎಂದು ನಮೂದಿಸಿರುವುದನ್ನು ತೆಗೆದುಹಾಕಬೇಕು ಎಂದು ಬಿಜೆಪಿ ನಾಯಕ ಅರಗ ಜ್ಞಾನೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪ್ರತಿಪಕ್ಷ ಬಿಜೆಪಿ ನಾಯಕ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ 110 ಕುರುಬ ಕುಟುಂಬಗಳಿಗೂ ನೋಟಿಸ್ ನೀಡಲಾಗಿದೆ. ಇವುಗಳ ತೆರವಿಗೆ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂತಹ ನೋಟಿಸ್ ಗಳಿಂದ ಜನರು ಸಂಕಷ್ಟ ಎದುರಿಸುತ್ತಿರುವ ನೂರಾರು ನಿದರ್ಶನಗಳಿವೆ ಎಂದು ಹೇಳಿದರು.
2014ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ನೀಡಿದ್ದ ಭರವಸೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ನೆನಪಿಸಿದರು. ರಾಜ್ಯದಲ್ಲಿ 1.10 ಲಕ್ಷ ಎಕರೆ ವಕ್ಫ್ ಆಸ್ತಿಗಳಿದ್ದು, ಇನಾಂ ನಿರ್ಮೂಲನೆ ಕಾಯ್ದೆ ಹಾಗೂ ಒತ್ತುವರಿಯಂತಹ ವಿವಿಧ ಕಾರಣಗಳಿಂದ ಈಗ ಕೇವಲ 20,000 ಎಕರೆಗೆ ಇಳಿದಿದ್ದು, ವಕ್ಫ್ ಆಸ್ತಿಗಳನ್ನು ಉಳಿಸುವುದು ಅಗತ್ಯವಾಗಿದೆ. ವಕ್ಫ್ ಆಸ್ತಿ ಉಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದಕ್ಕೆ ಕೇಂದ್ರದ ಕಾನೂನು ಇರುವುದರಿಂದ ನೋಟಿಸ್ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಬಸನಗೌಡ ಪಾಟೀಲ್ ಯತ್ನಾಳ್ ಬೀದರ್ ಜಿಲ್ಲೆಯಿಂದ ವಕ್ಫ್ ಆಸ್ತಿ ನೋಟಿಸ್ ಕುರಿತು ಜನ ಜಾಗೃತಿ ಅಭಿಯಾನ ನಡೆಸಿದ್ದರಿಂದ ವಿವರಣೆ ನೀಡಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳುವ ಮೂಲಕ ಯತ್ನಾಳ್ ಹಾಗೂ ಬಿ.ವೈ. ವಿಜಯೇಂದ್ರ ನಡುವಿನ ಶೀತಲ ಸಮರವನ್ನು ಉಲ್ಲೇಖಿಸಿ, ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ ಎಂದು ಟೀಕಿಸಿದರು.
ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಮುಖ್ಯಮಂತ್ರಿ, ರಾಜ್ಯದಲ್ಲಿ ಕೋಮುವಾದದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸಿದರೂ, ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದೆ ಎಂದು ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ಸರ್ಕಾರ ನೀಡಿದ ವಿವರಣೆಯಿಂದ ತೃಪ್ತರಾಗದ ಬಿಜೆಪಿ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿತು.
Advertisement