
ಬೆಂಗಳೂರು: ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭದ ಕಟೌಟ್‌ಗಳಲ್ಲಿ ಗಾಂಧೀಜಿ ಫೋಟೋ ನೋಡಲಿಲ್ಲ. ನಕಲಿ ಗಾಂಧಿಗಳ ಕಟೌಟ್‌ಗಳನ್ನು ಆಕಾಶದೆತ್ತರಕ್ಕೆ ಹಾಕಿದ್ದಾರೆ. ಜನರ ತೆರಿಗೆ ದುಡ್ಡಿನಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ ನಡೆಯುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಬೆಳಗಾವಿಯಲ್ಲಿ ಕೋಟ್ಯಂತರ ರೂಪಾಯಿ ಜನಗಳ ದುಡ್ಡು ಖರ್ಚು ಮಾಡಿ ಏನು ಸಂದೇಶ ಕೊಡುತ್ತಿದ್ದಾರೆ ಇವರು. ಇದು ನಾಗರಿಕ ಸರ್ಕಾರವಾ? ಬರೀ ಗಾಂಧೀಜಿ ಹೆಸರು ಹೇಳಿದರೆ ಆಗಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಈಗ ಇರುವುದು ಅಸಲಿ ಕಾಂಗ್ರೆಸ್ ಅಲ್ಲ, ನಕಲಿ ಕಾಂಗ್ರೆಸ್. ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಅದೇ ನಕಲಿ ಕಾಂಗ್ರೆಸ್. ಸ್ವಾತಂತ್ರ್ಯ ಗಳಿಸಿದ ಮೇಲೆ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಿ ಎಂದು ಸ್ವತಃ ಮಹಾತ್ಮ ಗಾಂಧೀಜಿ ಅವರು ಆಗಲೇ ಹೇಳಿದ್ದರು. ಅವರ ಕಾಂಗ್ರೆಸ್ ಈಗಿಲ್ಲ. ಈಗ ಇರುವುದು ಆಲಿಬಾಬ ಮತ್ತು 40 ಮಂದಿ ಕಳ್ಳರ ಕಾಂಗ್ರೆಸ್’ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ದೇಶ, ರಾಜ್ಯದಲ್ಲಿರುವುದು ಅಸಲಿ ಕಾಂಗ್ರೆಸ್ ಪಕ್ಷವಲ್ಲ. ಇದು ನಕಲಿ ಕಾಂಗ್ರೆಸ್ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ತತ್ವಗಳನ್ನು ಗಾಳಿಗೆ ತೂರಿದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಕೋಟಿಗಟ್ಟಲೆ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಮಹಾಧಿವೇಶನ ಮಾಡಲು ಹೊರಟಿರುವುದು ಸರಿಯಲ್ಲ. ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದುಕೊಟ್ಟಿದೆ ಕಾಂಗ್ರೆಸ್. ಗಾಂಧಿ ಭಾರತ ಹೆಸರಿನಲ್ಲಿ ಭಾರತದ ನಕಾಶೆಯನ್ನು ಕಾಂಗ್ರೆಸ್ಸಿಗರು ತಿರುಚಿರುವುದು ನಿಜಕ್ಕೂ ದುರ್ದೈವದ ಸಂಗತಿ ಎಂದರು.
ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಪಕ್ಷದ ಸಮಾವೇಶ ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು.
ನಕಲಿ ಗಾಂಧಿಗಳು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ಹೆಚ್.ಡಿ.ಕುಮಾರಸ್ವಾಮಿ, ಸಂಸದರು, ಯಾರನ್ನೂ ಆಹ್ವಾನಿಸದೇ ಕಾಂಗ್ರೆಸ್ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಎಂದು ದೂರಿದರು.
ಇದು ಕಾಂಗ್ರೆಸ್‌ನ ಕಾರ್ಯಕ್ರಮವಾಗಿರುವುದರಿಂದ ನಾವ್ಯಾರೂ ಹೋಗುವುದಿಲ್ಲ. ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆಗೆ ನಾವೆಲ್ಲರೂ ಪುಷ್ಪ ನಮನ ಸಲ್ಲಿಸಲಿದ್ದೇವೆ. ಕಾಂಗ್ರೆಸ್‌ನವರು ಅಖಂಡ ಭಾರತ ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ ಎಂದು ಆರ್ ಅಶೋಕ್ ಆರೋಪಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ಕಾಂಗ್ರೆಸ್‌ನ ನಾಯಕರಾಗಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿ, ಸರ್ಕಾರದ ವಿರುದ್ಧ ನಿಂತಿದ್ದರು. ತಮ್ಮದೇ ಪಕ್ಷ ಆರಂಭಿಸಿ ಅಲ್ಲಿಂದಲೇ ಸ್ಪರ್ಧಿಸಿದ್ದರು. ಜವಾಹರಲಾಲ್ ನೆಹರೂ ಅವರು ಅಂಬೇಡ್ಕರ್ ವಿರುದ್ಧ ಪ್ರಚಾರ ಮಾಡಿ ಸೋಲಿಸಿದ್ದರು. ಈಗ ಕಾಂಗ್ರೆಸ್ ನಾಯಕರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.
Advertisement