ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಸಮ್ಮತಿ; ಬಿಜೆಪಿ ವರಿಷ್ಠರ ಗ್ರೀನ್ ಸಿಗ್ನಲ್: ಸುಧಾಕರ್
ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಸಚಿವ ಡಾ.ಕೆ ಸುಧಾಕರ್ ಪಕ್ಷದ ಚಟುವಟಿಕೆಗಳಲ್ಲಿ ಆಕ್ಟಿವ್ ಆಗಿ ಇರಲ್ಲಿಲ್ಲ. ಆದರೆ ಸುಧಾಕರ್ ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು.
ದೆಹಲಿ ಪ್ರವಾಸ ಮುಗಿಸಿ ರಾಜ್ಯಕ್ಕೆ ಆಗಮಿಸಿದ ಬಳಿಕ ಸುಧಾಕರ್ ಚಿಕ್ಕಬಳ್ಳಾಪುರದಲ್ಲಿ ಮಿಂಚಿನ ಸಂಚಾರ ಆರಂಭಿಸಿದ್ದಾರೆ. ಲೋಕಸಭಾ ಚುನಾವಣೆಗೆ ಇನ್ನೂ 2-3 ತಿಂಗಳು ಬಾಕಿ ಇದ್ದು, ಈಗಾಗಲೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಜಿಲ್ಲೆಯ ಚೇಳೂರು ಬ್ರಾಹ್ಮಣರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಬಿಜೆಪಿ ನಾಯಕರು ಟಿಕೆಟ್ ನೀಡುವ ವಿಶ್ವಾಸವಿದೆ. ಹಾಗೆಯೇ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡರು ಸಹ ಹಸಿರು ನಿಶಾನೆ ತೋರಿದ್ದು ಕೆಲಸ ಪ್ರಾರಂಭ ಮಾಡಲು ತಿಳಿಸಿದ್ದಾರೆ ಎಂದಿದ್ದಾರೆ.
ನನ್ನ ಸ್ಪರ್ಧೆಗೆ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಹೆಚ್ಡಿ ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಒಬ್ಬ ಸಂಸದ ಏನು ಮಾಡಬಹುದೆಂದು ತೋರಿಸುತ್ತೇನೆ. ಕೆ. ಸುಧಾಕರ್ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಅಂದರೆ ಸುಧಾಕರ್. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ತಮ್ಮ ಪಾತ್ರವೂ ಇದೆ. ಎಂಟಿಬಿ ನಾಗರಾಜ್, ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿ ಸೇರಿದ್ದೆವು. ಆದರೆ, ನಮ್ಮ ತ್ಯಾಗಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಅನ್ಯಾಯವಾಗಿದೆ. ದೇಶ ಅಭಿವೃದ್ಧಿಯಾಗಬೇಕು ಅಂದರೆ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.
ನಿಮಗೆಲ್ಲಾ ಸುಧಾಕರ್ ಅಂದ್ರೆ ಅಭಿವೃದ್ಧಿ ಅಭಿವೃದ್ಧಿ ಅಂದ್ರೆ ಸುಧಾಕರ್ ಎನ್ನುವುದು ಗೊತ್ತಿದೆ. ನಾನು ಸಂಸದನಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದೇನೆ. ಕೃಷಿ, ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಯುವಕರಿಗೆ ಉದ್ಯೋಗ ಕೊಡಿಸವ ಮೂಲಕ ಅಭಿವೃದ್ಧಿ ಏನು ಅಂತ ತೋರಿಸಲಿದ್ದೇನೆ. ಹಾಗಾಗಿ ನಾನು ದೇವ ಮೂಲೆ ಚಾಕ್ ವೇಲ್ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಸೋತು ನಂತರ ಈಗ ಲೋಕ ಸಮರದತ್ತ ಸುಧಾಕರ್ ಚಿತ್ತ ಹರಿಸಿದ್ದು ದೆಹಲಿಗೆ ಭೇಟಿ ಮಾಡಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ