ತುಮಕೂರು ಕ್ಷೇತ್ರಕ್ಕಾಗಿ ಜಟಾಪಟಿ: ಹೊರಗಿನಿಂದ ಬಂದು ಗೆದ್ದಿರುವ ಇತಿಹಾಸವಿಲ್ಲ; ಸೋಮಣ್ಣಗೆ ಮಾಧುಸ್ವಾಮಿ ಟಕ್ಕರ್!

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಗೆದ್ದಿರುವ ಉದಾಹರಣೆ ಇಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಧುಸ್ವಾಮಿ ಮತ್ತು ವಿ ಸೋಮಣ್ಣ
ಮಾಧುಸ್ವಾಮಿ ಮತ್ತು ವಿ ಸೋಮಣ್ಣ

ತುಮಕೂರು:  ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊರಗಿನಿಂದ ಬಂದವರು ಗೆದ್ದಿರುವ ಉದಾಹರಣೆ ಇಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಸೋಮವಾರ  ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಹೊರಗಿನಿಂದ ಬಂದವರು ಜನರ ಮನಸ್ಸು ಗೆಲ್ಲಲು ಸಾಧ್ಯವಾಗಿಲ್ಲ. ಹಲವರು ಸೋತಿರುವ ಉದಾಹರಣೆ ನಮ್ಮ ಕಣ್ಣ ಮುಂದೆಯೇ ಇದೆ ಎಂದರು ಲೋಕಸಭೆಗೆ ಸ್ಪರ್ಧಿಸಲು ನಾನೂ ತಯಾರಿ ನಡೆಸಿದ್ದೇನೆ. ಟಿಕೆಟ್ ನೀಡುವಂತೆ ವರಿಷ್ಠರನ್ನು ಕೇಳಿದ್ದೇನೆ. ವಿ.ಸೋಮಣ್ಣ ಸ್ಪರ್ಧೆ ಬಗ್ಗೆ ಗೊತ್ತಿಲ್ಲ. ಗೆಲ್ಲುವ ಮಾನದಂಡದ ಮೇಲೆ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದರು.

ಈ ಕ್ಷೇತ್ರದಿಂದ ಹಿಂದೆ ಕೋದಂಡರಾಮಯ್ಯ, ಎ.ಕೃಷ್ಣಪ್ಪ, ಎಚ್.ಡಿ.ದೇವೇಗೌಡ ಸ್ಪರ್ಧಿಸಿ ಸೋತಿದ್ದಾರೆ. ಕಳೆದ ಬಾರಿ ಕಾಂಗ್ರೆಸ್– ಜೆಡಿಎಸ್ ಮೈತ್ರಿಯಿಂದ ಫಲಿತಾಂಶ ಏನಾಯಿತು ಎಂಬುದು ಗೊತ್ತಿದೆ. ಈಗ ಬಿಜೆಪಿ– ಜೆಡಿಎಸ್ ಒಪ್ಪಂದವಾಗಿದೆ. ಏನಾಗುವುದೋ ನೋಡಬೇಕು. ನಾಯಕರು ಒಂದಾದ ತಕ್ಷಣ ಕಾರ್ಯಕರ್ತರು ಒಟ್ಟಾಗುವುದಿಲ್ಲ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.

ಮಾಜಿ ಸಚಿವ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನವದೆಹಲಿಯಲ್ಲಿ ಲಾಭಿ ನಡೆಸುತ್ತಿರುವಾಗಲೇ ಜೆ.ಸಿ.ಮಾಧು ಸ್ವಾಮಿ ತಾವು ಕೂಡ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ ಎಂದು ಹೇಳಿದ್ದಾರೆ.

ಹಾಲಿ ಸಂಸದ ಜಿ.ಎಸ್.ಬಸವರಾಜು ಬೆಂಬಲಕ್ಕಿದ್ದು, ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯುವುದಾಗಿ ಸೋಮಣ್ಣ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಸಂಸದರು ಹಾಗೂ ಸ್ಥಳೀಯ ಮುಖಂಡರು ನನ್ನನ್ನು ಒಪ್ಪಿಕೊಂಡಿದ್ದಾರೆ, ಉಳಿದದ್ದು ಹೈಕಮಾಂಡ್  ನಿರ್ಧಾರಕ್ಕೆ ಬಿಟ್ಟಿದ್ದು, ಅದರ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ ಎಂದರು.

ಅವರು ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಬಿಜೆಪಿಯ ಮೈತ್ರಿಕೂಟದ ಜೆಡಿಎಸ್‌ನ ಪ್ರಮುಖ ನಾಯಕರಾದ ಎಚ್‌ಡಿ ದೇವೇಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.

ಆದರೆ ಮಾಧು ಸ್ವಾಮಿ ಅವರಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲ ನೀಡಿದ್ದಾರೆ. ಸೋಮವಾರ ಸೋಮಣ್ಣ ಅವರ ಸ್ಪರ್ಧೆಯನ್ನು ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಧುಸ್ವಾಮಿ, ಪಕ್ಷದ ಹೈಕಮಾಂಡ್ ಹೆಸರನ್ನು ಅಂತಿಮಗೊಳಿಸುವವರೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

ಸೋಮಣ್ಣ ಈಗಾಗಲೇ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಚಾಮರಾಜನಗರ, ಅರಸೀಕೆರೆ, ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದರಿಂದ ಅವರಿಗೆ ಶಕ್ತಿ ಇದೆ’ ಎಂದು ಮಾಧು ಸ್ವಾಮಿ ವ್ಯಂಗ್ಯವಾಡಿದರು.

ಬಸವರಾಜು ಹಾಲಿ ಸಂಸದರು, ಇದು ಅವರ ವೈಯಕ್ತಿಕ ಅಭಿಪ್ರಾಯ. ತಮಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಗೆ ಮನವಿ ಮಾಡಿದ್ದೇನೆ. ಯಾವ ರೀತಿಯಲ್ಲಿ ನಾನು ಅನರ್ಹ ಎಂದು ಪ್ರಶ್ನಿಸಿದರು. ತುಮಕೂರಿನಲ್ಲಿ ಜೆಡಿಎಸ್ ಮತಗಳು ಸಂಪೂರ್ಣವಾಗಿ ಬಿಜೆಪಿ ಪರವಾಗಿ ಪರಿವರ್ತನೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಸೋಮಣ್ಣ ಅವರು ತುಮಕೂರು ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾಗಿರುವ ವೀರಶೈವ ಉಪಪಂಗಡದಿಂದ ಬಂದವರಾಗಿದ್ದರೆ, ಮಾಧು ಸ್ವಾಮಿ ಇಲ್ಲಿ ಪ್ರಬಲವಾಗಿರುವ ನೊಳಂಬ ಲಿಂಗಾಯತ ಪಂಗಡಕ್ಕೆ ಸೇರಿದವರು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಮಾಧು ಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಲು ಅರ್ಹರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com