
ಮದ್ದೂರು: ಮಂಡ್ಯ ಜೆಡಿಎಸ್ ಘಟಕದಲ್ಲಿ ಗಂಡಸರು ಯಾರು ಇಲ್ವಾ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಂಡ್ಯದಲ್ಲಿ ಅಭ್ಯರ್ಥಿಗಳು ಯಾರು ಇಲ್ವಾ ಎಂದು ಮದ್ದೂರು ಶಾಸಕ ಉದಯ್ ಗೌಡ ಕದಲೂರು ಕಿಡಿಕಾರಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, ಮುಂಬರುಬವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಆಗುತ್ತಿರುವುದನ್ನು ಲೇವಡಿ ಮಾಡಿದರು. ಜೆಡಿಎಸ್ ಪಕ್ಷದ ಮಂಡ್ಯ ಘಟಕದಲ್ಲಿ ಯಾರೂ ಗಂಡಸರೇ ಇಲ್ಲವೇ? ನಿಖಿಲ್ ಗೆ ಯಾಕೆ ಟಿಕೆಟ್ ಕೊಡಬೇಕು? ಅವರು ಮಂಡ್ಯ ಜಿಲ್ಲೆಯವರಾ? ಬೇರೆ ಜಿಲ್ಲೆಯವರು ಏಕೆ ಬರಬೇಕು, ಸ್ಥಳೀಯ ಕಾರ್ಯಕರ್ತನಿಗೆ ಟಿಕೆಟ್ ನೀಡಲಿ ಎಂದು ಉದಯ ಗೌಡ ಹೇಳಿದರು.
ಐದು ವರ್ಷದಿಂದ ನಿಖಿಲ್ ಎಲ್ಲಿ ಹೋಗಿದ್ದರು, ಲೀಡರ್ ಮಕ್ಕಳೇ ಬರಬೇಕಾ, ಕಳೆದ ಬಾರಿ ಹೀನಾಯ ಸೋಲು ಅನುಭವಿಸಿದರೂ ಜೆಡಿಎಸ್ ನಾಯಕರಿಗೆ ಬುದ್ಧಿ ಬಂದಿಲ್ಲ ಎಂದು ಅವರು ವಾಸ್ತವ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಲ್ಲ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ವಿಲೀನಗೊಳ್ಳಲು ತಯಾರಾಗಿದ್ದಾರೆ, ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಇನ್ನೂ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಅವರು ಹೇಳಿದರು. ಯಾರೇ ಬಂದರೂ ಎದುರಿಸುವ ಶಕ್ತಿ ಕಾಂಗ್ರೆಸ್ ಗೆ ಇದೆ, ನಾವು ಸಮರ್ಥರಿದ್ದೇವೆ ಎಂದಿದ್ದಾರೆ.
ಹಿಂದೊಮ್ಮೆ ಮಂಡ್ಯ ಭಾಗದಲ್ಲಿ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಾಗಿದ್ದ ಕದಲೂರು ಉದಯ್ ಗೌಡ ಕಳೆದ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿ ಮದ್ದೂರು ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
Advertisement