ಕಾಂಗ್ರೆಸ್ ಸರ್ಕಾರ ರಾಜ್ಯಪಾಲರು ಸುಳ್ಳು ಹೇಳುವಂತೆ ಮಾಡಿದೆ, ಇದು ನಿರಾಸೆಯ ಭಾಷಣ: ಬಿಜೆಪಿ

ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಂದ ಕಾಂಗ್ರೆಸ್ ಸರ್ಕಾರ ಸುಳ್ಳುಗಳನ್ನು ಹೇಳಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಸೋಮವಾರ ಆರೋಪಿಸಿದೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ

ಬೆಂಗಳೂರು: ವಿಧಾನಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಂದ ಕಾಂಗ್ರೆಸ್ ಸರ್ಕಾರ ಸುಳ್ಳುಗಳನ್ನು ಹೇಳಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಸೋಮವಾರ ಆರೋಪಿಸಿದೆ.

ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಮೊದಲ ರಾಜ್ಯಪಾಲರ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇಷ್ಟೊಂದು ಸಪ್ಪೆ ಹಾಗೂ ನಿರಾಸೆಯ ಭಾಷಣ ಯಾವತ್ತೂ ಕೇಳಿರಲಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯಪಾಲರನ್ನು ಭಾಷಣದಲ್ಲಿ ಸುಳ್ಳು ಮಾತನಾಡುವಂತೆ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರ ತಂದ ಯೋಜನೆಗಳನ್ನು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಕಾಂಗ್ರೆಸ್ ತನ್ನ ಯೋಜನೆ ಎಂದು ಬಿಂಬಿಸುತ್ತಿರುವುದಾಗಿ ಆರ್ ಅಶೋಕ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ರಾಜ್ಯ ಸರ್ಕಾರ ಐದು ಗ್ಯಾರಂಟಿ ಜಾರಿಗೆ ತಂದಿದ್ದೇವೆ ಎಂದು ಹೇಳಿಕೊಂಡರೂ ಯುವ ನಿಧಿ ಯೋಜನೆ ಇನ್ನೂ ನಿರುದ್ಯೋಗಿ ಯುವಕರ ಕೈಸೇರಿಲ್ಲ. ಬರ ಪರಿಹಾರ ನೀಡಿದ್ದೇವೆ ಎಂದು ಹೇಳಿದರೂ ಪರಿಹಾರ ಇನ್ನೂ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ಒಂದೇ ಬಾರಿಗೆ ಪರಿಹಾರ ನೀಡಿತ್ತು. ಬರಪೀಡಿತ ರೈತರಿಗೆ 25,000 ರೂ.ಗಳ ಪರಿಹಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಬದಲಿಗೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿವಮೊಗ್ಗ ವಿಮಾನ ನಿಲ್ದಾಣ ಪೂರ್ಣಗೊಂಡಿತು. ಮೆಟ್ರೊ ರೈಲು ಯೋಜನೆ ಕೇಂದ್ರ ಸರ್ಕಾರದ್ದು. ಜಲ ಜೀವನ್ ಮಿಷನ್‌ನ ಕೊಡುಗೆಯೂ ಇದೆ. ಆದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು ತನ್ನದು ಎಂದು ಹೇಳುತ್ತಿದೆ ಎಂದರು.

ರಾಜ್ಯಪಾಲರ ಭಾಷಣ ನಿರಾಶಾದಾಯಕವಾಗಿದೆ ಎಂದ ಬೊಮ್ಮಾಯಿ, ಇದುವರೆಗೆ ಇಂತಹ ‘ಇಷ್ಟೊಂದು ಸಪ್ಪೆ’ ಭಾಷಣವನ್ನು ಕೇಳಿರಲಿಲ್ಲ.  ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿರುವ ಜನವಿರೋಧಿ ಸರ್ಕಾರ ಇರುವುದನ್ನು ತೋರಿಸುತ್ತದೆ ಎಂದರು.

ರಾಜ್ಯಪಾಲರ ಭಾಷಣದಲ್ಲಿ ಈಗಿನ ಸರ್ಕಾರದ ಯಾವುದೇ ಸಾಧನೆಗಳನ್ನು ಉಲ್ಲೇಖಿಸಿಲ್ಲ. ಕೇವಲ ಹಿಂದಿನ ಸರ್ಕಾರದ ಕೆಲಸಗಳನ್ನು ಕಾಂಗ್ರೆಸ್ ಆಡಳಿತದ ಸಾಧನೆ ಎಂದು ತೋರಿಸಲಾಗಿದೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ರಾಜ್ಯಪಾಲರ ಭಾಷಣ ನಿರಾಶಾದಾಯಕ ಮತ್ತು ಸುಳ್ಳುಗಳಿಂದ ಕೂಡಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆ ಹೊರತುಪಡಿಸಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಸ್ಪಷ್ಟವಾಗಿ. ಖಾತರಿ ಯೋಜನೆಗಳ ಅಸಮರ್ಪಕ ಅನುಷ್ಠಾನದಿಂದ ಸರ್ಕಾರ ಗೊಂದಲದಲ್ಲಿ ಮುಳುಗಿದೆ ಎಂದು ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com