ಮೈತ್ರಿ ಧರ್ಮ ಎಡವಟ್ಟಾದರೆ ಕಷ್ಟ, ಕೊಟ್ಟಿರುವ ಟಾಸ್ಕ್ ಪೂರ್ಣಗೊಳಿಸಿ; 28 ಸ್ಥಾನಗಳನ್ನು ಗೆಲ್ಲಲು ಯೋಜನೆ ರೂಪಿಸಿ: ಅಮಿತ್ ಶಾ

ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಹಾಗೂ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ನೀಡಬೇಕೆಂಬ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ನಿಮಗೆ ವಹಿಸಿರುವ ಟಾಸ್ಕ್‌ ಮಾತ್ರ ಪೂರ್ಣ ಮಾಡಿ. ಮೈತ್ರಿ ಧರ್ಮ ಪಾಲನೆ ಸ್ವಲ್ಪ ಎಡವಟ್ಟಾದರೆ ಕಷ್ಟವಾಗುತ್ತದೆ
ಅಮಿತ್ ಶಾ
ಅಮಿತ್ ಶಾ

ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ಹಾಗೂ ಲೋಕಸಭಾ ಕ್ಷೇತ್ರದ ಟಿಕೆಟ್‌ ಯಾರಿಗೆ ನೀಡಬೇಕೆಂಬ ಬಗ್ಗೆ ನಾವು ನಿರ್ಧಾರ ಮಾಡುತ್ತೇವೆ. ನಿಮಗೆ ವಹಿಸಿರುವ ಟಾಸ್ಕ್‌ ಮಾತ್ರ ಪೂರ್ಣ ಮಾಡಿ. ಮೈತ್ರಿ ಧರ್ಮ ಪಾಲನೆ ಸ್ವಲ್ಪ ಎಡವಟ್ಟಾದರೆ ಕಷ್ಟವಾಗುತ್ತದೆ ಎಂದು ಅಮಿತ್ ಶಾ  ಮೈಸೂರು ಕ್ಲಸ್ಟರ್‌ ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ

ಒಂದು ದಿನದ ಪ್ರವಾಸ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಅವರು, ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಸಿದರು. ಪಕ್ಷದ ಪ್ರಮುಖರು ಭಾಗಿಯಾಗಿದ್ದ ಈ ಸಭೆಯಲ್ಲಿ ಹೈಕಮಾಂಡ್‌ನ ಕಾರ್ಯಸೂಚಿ ಬಗ್ಗೆ ಸಂದೇಶ ನೀಡಿದ ಅಮಿತ್‌ ಶಾ, ಅಭ್ಯರ್ಥಿಗಳ ಆಯ್ಕೆಯ ಚಿಂತೆಯನ್ನು ಹೈಕಮಾಂಡ್‌ಗೆ ಬಿಡಿ. ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ಟಾಸ್ಕ್‌ ಪೂರ್ಣಗೊಳಿಸಲು ಓಡಲು ಶುರು ಮಾಡಿ,'' ಎಂದು ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೂಚಿಸಿದ್ದಾರೆ.

ಇಡೀ ದೇಶದಲ್ಲಿ ಮೋದಿ ಸರ್ಕಾರದ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಾಮಮಂದಿರ ಉದ್ಘಾಟನೆ ಬಳಿಕ ಪಕ್ಷದ ಪರವಾದ ಅಲೆ ಹೆಚ್ಚಾಗಿದೆ. ಹಾಗಾಗಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ನಿಟ್ಟಿನಲ್ಲಿ ಎಲ್ಲ 28 ಕ್ಷೇತ್ರಗಳಲ್ಲೂ ಜಯ ದಾಖಲಿಸಬೇಕು,'' ಎಂಬ ಸೂಚನೆ ಕೊಟ್ಟರು. ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿಸಬೇಕು, ದೇಶದಲ್ಲಿ ಬಿಜೆಪಿ 400 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ, ರಾಜ್ಯದಲ್ಲೂ ಕೂಡ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಹೊಸ ದಾಖಲೆ ಬರೆಯಿರಿ ಎಂದು ಅಮಿತ್ ಶಾ ಸೂಚನೆ ನೀಡಿದ್ದಾರೆ.

ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರಗಳಲ್ಲಿ ಬೂತ್ ಮಟ್ಟದಲ್ಲಿ ಪಕ್ಷ ಬಲಪಡಿಸುವ ಮೂಲಕ ಅವುಗಳನ್ನು ಬಿಜೆಪಿ ಮತಗಳನ್ನಾಗಿ ಪರಿವರ್ತಿಸಲು ನಿಗಾವಹಿಸಿಬೇಕೆಂದು ಮುಖಂಡರಿಗೆ ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಂತರ ನಡೆದ ಮೈಸೂರು ಕ್ಲಸ್ಟರ್ ಮಟ್ಟದ ಸಭೆಯಲ್ಲಿ ಮೈಸೂರು-ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಶಾಸಕರು, ಪರಿಷತ್ ಸದಸ್ಯರು, ಪಕ್ಷದ ಮುಖಂಡರು ಸೇರಿ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡರು. ಈ ಭಾಗದಲ್ಲಿ ಕಾಂಗ್ರೆಸ್ ಶಾಸಕರು ಹೆಚ್ಚಿದ್ದು, ಬಿಜೆಪಿಗೆ ಎದುರಾಗಬಹುದಾದ ಸವಾಲುಗಳು ಮತ್ತು ಅದನ್ನು ಎದುರಿಸುವ ಕುರಿತು ಶಾ ಮುಖಂಡರಿಗೆ ಕಿವಿಮಾತು ಹೇಳಿದರು.

ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕೇಂದ್ರ ಸರ್ಕಾರದ ಮಾನ ಕಳೆಯುವ ಪ್ರಯತ್ನ ನಡೆಸಿದ ಕಾಂಗ್ರೆಸ್‌ಗೆ ಅವರದ್ದೇ ಹಾದಿಯಲ್ಲಿ ತಿರುಗೇಟು ನೀಡಬೇಕು. ಕಳೆದ ಹತ್ತು ವರ್ಷದಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡಿರುವ ಅನುದಾನವನ್ನು ಅಂಕಿ–ಅಂಶ ಸಮೇತ ಜನರ ಮುಂದಿಸಬೇಕು. ಬಿಜೆಪಿ–ಜೆಡಿಎಸ್ ಮೈತ್ರಿಕೂಟವು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಬೇಕು ಎಂದು ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಪ್ರಚಾರದ ತಂತ್ರಗಳ ಬಗ್ಗೆ ಹೆಚ್ಚು ಚರ್ಚೆಯಾಯಿತು. ಪ್ರಚಾರದ ರೋಡ್‌ ಮ್ಯಾಪ್‌ ಕುರಿತು ಶಾ ರಾಜ್ಯ ಮುಖಂಡರಿಂದ ಮಾಹಿತಿ ಪಡೆದು ಕೆಲವು ಸೂಚನೆಗಳನ್ನು ನೀಡಿದರು. ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಆದರೆ, ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com